ಶಿವಮೊಗ್ಗ: ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ನ ಪ್ರಯೋಗ ಅತ್ಯಂತ ಅನುಕರಣೀಯವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು. ಶಿವಮೊಗ್ಗ ನಗರ ವ್ಯಾಪ್ತಿಯ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭವಾಗಿದ್ದು, ಅಲ್ಲಿಗೆ ಭೇಟಿ ನೀಡಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ರೂಂ ಮಾಡಿ ಹಾಗೂ ಅಲ್ಲಿ ಮೂಲಭೂತ ಸೌಕರ್ಯ ನೀಡುವ ಮೂಲಕ ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಶಿವಮೊಗ್ಗ ಸ್ಮಾರ್ಟ್ ಸಿಟಿ ಆಗ್ತಾ ಇದೆ. ಅದೇ ರೀತಿ ಸರ್ಕಾರಿ ಶಾಲೆಗಳು ಸಹ ಸ್ಮಾರ್ಟ್ ಸ್ಕೂಲ್ ಆಗುತ್ತಿರುವುದು ನನಗೆ ಅತ್ಯಂತ ವಿಶ್ವಾಸ ತಂದಿದೆ. ಶಿವಮೊಗ್ಗದಲ್ಲಿ ಸ್ಮಾರ್ಟ್ ಕ್ಲಾಸ್ ರೂಂ ಪ್ರಯೋಗವನ್ನು ರಾಜ್ಯದ ವಿವಿಧೆಡೆ ಅನುಷ್ಠಾನಕ್ಕೆ ತರಲಾಗುತ್ತದೆ ಎಂದರು.
ಪ್ರಥಮ ಪಿಯುಸಿ ತರಗತಿ ಪ್ರಾರಂಭಿಸಬೇಕು ಎಂಬ ಕೂಗು ಇದೆ. ಈ ಹಿನ್ನೆಲೆಯಲ್ಲಿ ಪಿಯು ಬೋರ್ಡ್ನ ತಾಂತ್ರಿಕ ಸಲಹಾ ಸಮಿತಿ ಜೊತೆ ಚರ್ಚೆ ನಡೆಸಿ, ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು. ಅದೇ ರೀತಿ 8 ಮತ್ತು 9 ತರಗತಿ ಪ್ರಾರಂಭ ಮಾಡುವ ಕುರಿತು ಸಹ ಚರ್ಚಿಸಿ, ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು. ಹಾಗೂ ಮುಂದಿನ ಶೈಕ್ಷಣಿಕ ವರ್ಷದಿಂದ ಮಕ್ಕಳಿಗೆ 45 ದಿನಗಳ ಬ್ರಿಡ್ಜ್ ಕೋರ್ಸ್ ಪ್ರಾರಂಭ ಮಾಡಲಾಗುವುದು ಎಂದರು.
ಶಾಲೆಯ ಶುಲ್ಕದ ಕುರಿತು ಶಿಕ್ಷಣ ಇಲಾಖೆಯ ಆಯುಕ್ತರು, ಎಲ್ಲಾ ಶಾಲೆಯ ಪೋಷಕ ಪ್ರತಿನಿಧಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಈಗ ಪೋಷಕರ ಸ್ಥಿತಿ ಬಹಳ ಜರ್ಜರಿತವಾಗಿದೆ. ಅದೇ ರೀತಿ ಖಾಸಗಿ ಶಾಲೆಯ ಶಿಕ್ಷಕರ ಸ್ಥಿತಿ ಸಹ ಗಂಭೀರವಾಗಿದೆ. ಇದರಿಂದ ಪೋಷಕರು ಹಾಗೂ ಶಿಕ್ಷಕರ ಪರಿಸ್ಥಿತಿಯನ್ನು ನೋಡಿ ಒಂದು ಶುಲ್ಕ ನಿಯಮ ಮಾಡಿ ನನಗೆ ಕಳುಹಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಅದನ್ನು ಜಾರಿ ಮಾಡಲಾಗುವುದು ಎಂದರು.
ಈಗಾಗಲೇ ನಾವು ಶೇ. 30ರಷ್ಟು ಪಠ್ಯಕ್ರಮವನ್ನು ಕಡಿತ ಮಾಡಲಾಗಿದೆ. ಅದೇ ರೀತಿ ಎನ್ಸಿಆರ್ಟಿರವರು ಸಹ ಶೇ. 30ರಷ್ಟು ಪಠ್ಯಕ್ರಮ ಕಟ್ ಮಾಡಿದ್ದಾರೆ. ನಮ್ಮ ಉದ್ದೇಶ ಮಕ್ಕಳು ಶಾಲೆಯಿಂದ ಹೊರಗುಳಿಯಬಾರದು ಹಾಗೂ ಪಠ್ಯಕ್ರಮ ಮಕ್ಕಳಿಗೆ ಹೊರೆಯಾಗಬಾರದು ಎಂದರು. ಅನುದಾನಿತ ಶಿಕ್ಷಕರ ನೇಮಕ ಕುರಿತು ಹಣಕಾಸು ಇಲಾಖೆಗೆ ಅನುಮತಿ ಕೇಳಲಾಗಿದೆ ಎಂದು ತಿಳಿಸಿದರು.