ಶಿವಮೊಗ್ಗ : ಶೇಕಡ 101ರಷ್ಟು ಮಧು ಬಂಗಾರಪ್ಪ ಕಾಂಗ್ರೆಸ್ನಲ್ಲಿ ಉಳಿಯಲ್ಲ ಎಂದು ಸಹೋದರನ ವಿರುದ್ಧ ಸೊರಬ ಶಾಸಕ ಕುಮಾರ ಬಂಗಾರಪ್ಪ ವಾಗ್ದಾಳಿ ನಡೆಸಿದರು. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಧು ಬಂಗಾರಪ್ಪ ಜೆಡಿಎಸ್ ಒಡೆದು ಯಾಕೆ ಹೊರಬಂದರು ಎಂದು ಕುಮಾರಸ್ವಾಮಿ ಹೇಳಬೇಕು ಎಂದರು.
ಮಧು ಬಂಗಾರಪ್ಪನವರು ಮೊದಲು ಸ್ಪರ್ಧಿಸಿದ್ದು ಬಿಜೆಪಿ ಅಭ್ಯರ್ಥಿಯಾಗಿ ಎಂಬುದನ್ನು ಮರೆಯಬಾರದು. ಮಧು ಬಂಗಾರಪ್ಪ ಹೇಳಿಕೆಗಳು ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತಾಗಿದೆ. ಮಧು ಬಂಗಾರಪ್ಪ, ಮುರುಳಿ ಮನೋಹರ್ ಜೋಶಿ, ಅಡ್ವಾಣಿ, ಬಿಬಿ ಶಿವಪ್ಪ ಅವರ ಬಗ್ಗೆ ಹೇಳಿಕೆ ನೀಡಿರುವುದು ಖಂಡನೀಯ ಎಂದು ಹೇಳಿದರು.
ಬಗರ್ ಹುಕುಂನಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ : ಮಧು ಬಂಗಾರಪ್ಪ ಅಧಿಕಾರಾವಧಿಯಲ್ಲಿ ಸಾಕಷ್ಟು ಬಗರ್ ಹುಕುಂ ಭ್ರಷ್ಟಾಚಾರ ನಡೆದಿದೆ. ಸೊರಬ ತಾಲೂಕಿನಾದ್ಯಂತ ಬಗರ್ ಹುಕುಂನಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದರು. ಮಧು ಅವರು ಬಿಜೆಪಿ, ಸಮಾಜವಾದಿ, ಜೆಡಿಎಸ್ ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮುಂದಿನ ಚುನಾವಣೆಗೆ ಮತ್ತೆ ಯಾವ ಪಕ್ಷ ಹುಡುಕುತ್ತಾರೋ? ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಅಲ್ಲದೇ ಶರಾವತಿ ಡೆಂಟಲ್ ಕಾಲೇಜ್ ಹಗರಣ, ಸೊರಬದಲ್ಲಿ ಬಗರ್ ಹುಕುಂ ಹಗರಣ ಎಲ್ಲದರಲ್ಲೂ ಮಧು ಬಂಗಾರಪ್ಪ ಇದ್ದಾರೆ. ತಂದೆ ಬಂಗಾರಪ್ಪ ಸಮಾಧಿಯನ್ನು 10 ವರ್ಷಗಳಿಂದ ಮಾಡುತ್ತಾ ಇದ್ದಾರೆ. ತಂದೆಯವರ ಸಮಾಧಿ ಮಾಡಲು ಯೋಗ್ಯತೆ ಇಲ್ಲ ಎಂದು ಮಧು ಬಂಗಾರಪ್ಪ ವಿರುದ್ಧ ಕಿಡಿಕಾರಿದರು.
ಯಡಿಯೂರಪ್ಪ ಸಿಎಂ ಆಗಿದ್ದ ಕಾಲದಲ್ಲಿ ಸಮಾಧಿಯ ಸ್ಮಾರಕಕ್ಕೆ ಅನುದಾನ ಕೊಟ್ಟಿದ್ದಾರೆ ಎಂದರು. ಸಮಾಜವಾದಿ, ಜೆಡಿಎಸ್ ಪಕ್ಷದ ಪಾರ್ಟಿ ಫಂಡ್ ಗಳಲ್ಲೂ ಭ್ರಷ್ಟಾಚಾರ ನಡೆಸಿದ್ದಾರೆ. 2013ರಿಂದ 2018 ರವರೆಗೆ ಸೊರಬ ತಾಲೂಕಿನಲ್ಲಿ ಎಷ್ಟು ರಸ್ತೆ, ಎಷ್ಟು ನೀರಾವರಿ ಯೋಜನೆ ತಂದಿದ್ದಾರೆ ಎಂದು ಮಧು ಲೆಕ್ಕ ಕೊಡಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ಗೆ ಏನೂ ಮಾಡಿದರೂ ಸಂತೋಷ ಆಗಲ್ಲ: ಕಾಂಗ್ರೆಸ್ಸಿಗರಿಗೆ ರಸ್ತೆ ಸೇತುವೆ ಮಾಡಿದರೆ ಸಂತೋಷ ಆಗಲ್ಲ, ಪೆಟ್ರೋಲ್ ಬೆಲೆ ಇಳಿಕೆಯಾದರೂ ಸಂತೋಷ ಆಗಲ್ಲ, ಯುಕ್ರೇನ್ ನಿಂದ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದರೂ ಸಂತೋಷ ಆಗಲ್ಲ ಎಂದು ಪ್ರಧಾನಿ ಹೇಳಿದ್ದು ಸತ್ಯವಾಗಿದೆ.
ಭಾರತ್ ಜೋಡೋ ಕಾರ್ಯಕ್ರಮದಲ್ಲಿ ಮಧು ಬಂಗಾರಪ್ಪ ಭಾಗವಹಿಸಿದಾಗ ಎರಡು ಬಾರಿ ಗಾಂಧಿ ಕೈ ಹಿಡಿದುಕೊಂಡಿದ್ದಕ್ಕೆ ದೊಡ್ಡ ಲೀಡರ್ ಅಂದುಕೊಂಡಿದ್ದಾರೆ. ಇವರು ಆರ್ ಎಸ್ ಎಸ್ ಮುಖಂಡರಾದ ದತ್ತಾತ್ರೇಯ ಹೊಸಬಾಳೆ ಹೆಸರನ್ನು ಬಳಸಿರುವುದು ಶೋಭೆ ತರುವುದಿಲ್ಲ. ಡಿಕೆ ಶಿವಕುಮಾರ್ ಇಡಿ ಮತ್ತು ಐಟಿ ಕೇಸ್ ನಲ್ಲಿ ದಾಖಲೆಗಳನ್ನು ಕೊಡುವಂತೆ, ಮುಂದೆ ಮಧು ಬಂಗಾರಪ್ಪ ಕೂಡ ದಾಖಲೆಗಳನ್ನು ನೀಡಬೇಕಾಗುತ್ತದೆ ಎಚ್ಚರಿಕೆಯನ್ನು ನೀಡಿದರು.
ಮುಲಾಯಂ ಸಿಂಗ್ಗೆ ಸಂತಾಪ ಸೂಚಿಸಿದ ಕುಮಾರ ಬಂಗಾರಪ್ಪ : ಸೊರಬ ಬಿಜೆಪಿ ಗೊಂದಲವನ್ನು ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಅಧ್ಯಕ್ಷರ ಗಮನಕ್ಕೆ ತರಲಾಗಿದೆ. ಬಿಜೆಪಿ ಕಟ್ಟಿದ ಹಿರಿಯ ಪದ್ಮನಾಭ ಆ ರೀತಿ ಹೇಳಿಕೆ ಕೊಟ್ಟಿದ್ದು ಸರಿಯಲ್ಲ ಎಂಬುದು ನನ್ನ ಭಾವನೆ. ಜೊತೆಗೆ ಮುಲಾಯಂಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ ಅವರು ತಮ್ಮ ತಂದೆಯ ಜೊತೆಗಿನ ಅವರ ಒಡನಾಟವನ್ನು ನೆನಪಿಸಿಕೊಂಡರು.
ಇದನ್ನೂ ಓದಿ : ಮಳೆಯಲ್ಲೇ ಬೀದಿಗಿಳಿದ ಕಬ್ಬು ಬೆಳೆಗಾರರು: ಕಬ್ಬಿಗೆ 5,500 ರೂ ನಿಗದಿ ಮಾಡುವಂತೆ ಅರೆ ಬೆತ್ತಲೆ ಉರುಳು ಸೇವೆ