ಶಿವಮೊಗ್ಗ: ಮೇಲ್ಮನೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ - ಜೆಡಿಎಸ್ನಲ್ಲಿದ್ದ ಅನೇಕರು ಬಿಜೆಪಿಗೆ ಬಂದಿದ್ದಾರೆ. ಅವರು ಸರ್ಕಾರ ರಚನೆ ಮಾಡುವಲ್ಲಿ ಮತ್ತು ಉಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅವರ ಋಣವನ್ನೂ ಸಹ ನಾವು ತೀರಿಸಬೇಕಾಗಿದೆ. ಸುಮ್ಮನೆ ಕರೆದು ಮೋಸ ಮಾಡುವ ಪ್ರಶ್ನೆಯೇ ಉದ್ಭವವಾಗಲ್ಲ ಎಂದರು.
ಇದರ ಜೊತೆಗೆ, ಹಲವು ವರ್ಷದಿಂದ ಪಕ್ಷ ಕಟ್ಟಲು ದುಡಿದ ಸಾಮಾನ್ಯ ಕಾರ್ಯಕರ್ತರು ಇದ್ದಾರೆ. ಪ್ರಸ್ತುತ 9 ಸ್ಥಾನಗಳಿದ್ದು, ಅವರಿಗೂ ಅವಕಾಶ ಕಲ್ಪಿಸಬೇಕಿದೆ. ಸೋಮವಾರ ಸಂಜೆ ಬಿಜೆಪಿ ಕೋರ್ ಕಮಿಟಿಯ ಸಭೆ ನಡೆಯಲಿದೆ. ಸಭೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಕೇಂದ್ರ ಚುನಾವಣಾ ಸಮಿತಿಗೆ ಪಟ್ಟಿಯನ್ನು ಕಳುಹಿಸಲಾಗುತ್ತದೆ.
ಇಲ್ಲಿ ಹಳಬರು, ಹೊಸಬರು ಎಂಬ ವಿಚಾರವೇ ಬರಲ್ಲ. ಸರ್ಕಾರ ಉಳಿಸಿದವರಿಗೂ, ಸಾಮಾನ್ಯ ಕಾರ್ಯಕರ್ತರಿಗೂ ತೃಪ್ತಿ ತರುವ ರೀತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಈಶ್ವರಪ್ಪ ತಿಳಿಸಿದರು.
ಪರಿಷತ್ ಚುನಾವಣೆ ಬಳಿಕ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರ್ರಚನೆ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಸಿಎಂ ಹಾಗೂ ಕೇಂದ್ರದ ನಾಯಕರು ನಿರ್ಧಾರ ಮಾಡ್ತಾರೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಕೆರೆಗಳ ಸುತ್ತ 3 ಲಕ್ಷ ಸಸಿಗಳನ್ನು ನೆಡಲು ಯೋಜನೆ:
ವೀರಣ್ಣನಬೆನವಳ್ಳಿ ಗ್ರಾಮದ ಕೆರೆಯ ದಂಡೆಯಲ್ಲಿ ಸಸಿಗಳನ್ನು ನೆಟ್ಟು ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಜಿಲ್ಲೆಯ ಎಲ್ಲಾ 271 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕೆರೆಗಳ ಸುತ್ತ ಕನಿಷ್ಠ 3 ಲಕ್ಷ ಸಸಿಗಳನ್ನು ನೆಡುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.