ಶಿವಮೊಗ್ಗ: ನಗರದ ಎಂಆರ್ಎಸ್ ವೃತ್ತದಲ್ಲಿ ಡಾ. ಬಾಬು ಜಗಜೀವನ್ ರಾಂ ಅವರ ಕಂಚಿನ ಪ್ರತಿಮೆ ಸ್ಥಾಪಿಸುವಂತೆ ಕರ್ನಾಟಕ ಮಾದಿಗ ದಂಡೋರ ಸಮಿತಿಯ ಜಿಲ್ಲಾಧ್ಯಕ್ಷ ಸಿ.ಮೂರ್ತಿ ಒತ್ತಾಯಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದ ಎಂಆರ್ಎಸ್ ವೃತ್ತದಲ್ಲಿ ಬಾಬು ಜಗಜೀವನ್ ರಾಂ ಅವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಬೇಕು. ಈ ಹಿಂದೆ ಮಹಾನಗರ ಪಾಲಿಕೆಯಲ್ಲಿ ವಿವಿಧ ಯೋಜನೆಯಡಿ ಎಸ್ಸಿ,ಎಸ್ಟಿ ಸಮುದಾಯದ ಜನರಿಗೆ ಸೌಕರ್ಯಗಳನ್ನು ನೀಡಲಾಗುತ್ತಿತ್ತು. ಆದರೆ, ಕಳೆದ ನಾಲ್ಕು ವರ್ಷಗಳಿಂದ ಸೌಲಭ್ಯಗಳನ್ನು ತಡೆಹಿಡಿಯಲಾಗಿದೆ. ಇದರಿಂದ ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ ಎಂದು ದೂರಿದರು.
ಜಿಲ್ಲಾ ಮೆಗ್ಗನ್ ಆಸ್ಪತ್ರೆಯಲ್ಲಿ ನರರೋಗ ತಜ್ಞರಿಲ್ಲ, ಹೀಗಾಗಿ ಬಹಳಷ್ಟು ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ನಗರದ ಬಹುತೇಕ ಹೋಟೆಲ್ಗಳಲ್ಲಿ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ, ಸ್ವಚ್ಛತೆಯೂ ಇಲ್ಲ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಅಂಬೇಡ್ಕರ್ ಬಸವ ಇಂದಿರಾ ವಸತಿ ಯೋಜನೆಗಳಿಗೆ ಕೂಡಲೇ ರಾಜೀವ್ ಗಾಂಧಿ ವಸತಿ ನಿಗಮದಿಂದ ಹಣ ಬಿಡುಗಡೆ ಮಾಡಬೇಕು ಅವರು ಸರ್ಕಾರವನ್ನು ಆಗ್ರಹಿಸಿದ್ರು.