ಶಿವಮೊಗ್ಗ : ತಾಲೂಕು ಕಚೇರಿ ಕಟ್ಟಡದಲ್ಲಿರುವ ಶಿರಸ್ತೇದಾರ್ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಒಂದೂವರೆ ಲಕ್ಷ ರೂ. ಹಣ ಸ್ವೀಕರಿಸುವಾಗ ಶಿರಸ್ತೇದಾರ್ ಅವರು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಹಕ್ಕು ದಾಖಲೆ ಶಾಖೆ ಶಿರಸ್ತೇದಾರ್ ಜಿ. ಅರುಣ್ ಕುಮಾರ್ ಅವರ ಮೇಲೆ ಲೋಕಾಯುಕ್ತ ದಾಳಿಯಾಗಿದ್ದು, ಲೋಕಾಯುಕ್ತ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ ದಾಳಿ ನಡೆಸಿದರ ಬಗ್ಗೆ ಮಾತನಾಡಿದ ಲೋಕಾಯುಕ್ತ ಎಸ್ಪಿ ವಾಸುದೇವ್ ಅವರು, ಹನುಮಂತ ಬನ್ನಿಕೋಡ್ ಎಂಬುವರಿಗೆ ಸಂಬಂಧಿಸಿದ ಮನೆಯ ಖಾತೆ ಬದಲಾವಣೆಗೆ ಶಿರಸ್ತೇದಾರ್ ಜಿ. ಅರುಣ್ ಕುಮಾರ್ 3 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ವೇಳೆ ಹನುಮಂತ ಬನ್ನಿಕೋಡ್ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.
ಇದನ್ನೂ ಓದಿ : ಲೋಕಾಯುಕ್ತ ದಾಳಿ ವೇಳೆ ನಕ್ಷತ್ರ ಆಮೆ ಪತ್ತೆ..
ಹಾಗಾಗಿ ಲಂಚಕ್ಕೆ ಬೇಡಿಕೆ ಇಟ್ಟಿರುವುದನ್ನು ಮೊದಲು ಖಚಿತ ಪಡಿಸಿಕೊಂಡೆವು. ಬಳಿಕ ಇಂದು 1.5 ಲಕ್ಷ ರೂ. ಹಣ ಸ್ವೀಕರಿಸುತ್ತಿದ್ದ ಸಮಯದಲ್ಲಿ ಶಿವಮೊಗ್ಗ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ್ ನೇತೃತ್ವದಲ್ಲಿ ನಮ್ಮ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಹಣ ಹಾಗೂ ಶಿರಸ್ತೇದಾರ ಅರುಣ್ ಕುಮಾರ್ನನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಮುಂದೆ ಅಧಿಕಾರಿ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಹೆಡ್ ಕಾನ್ಸ್ಟೇಬಲ್ ಲೋಕಾಯುಕ್ತ ಬಲೆಗೆ : ಪ್ರಕರಣವೊಂದರಲ್ಲಿ ಆರೋಪಿಗೆ ಸಹಾಯ ಮಾಡುವುದಾಗಿ 50 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಹೆಡ್ ಕಾನ್ಸ್ಟೇಬಲ್ ಒಬ್ಬರನ್ನು ಜುಲೈ 16 ಭಾನುವಾರದಂದು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಬಂಧಿತನನ್ನು ರಾಮನಗರದ ಸೈಬರ್ ಕ್ರೈಂ, ಆರ್ಥಿಕ ಅಪರಾಧ ಮತ್ತು ಮಾದಕ ದ್ರವ್ಯ (ಸಿಇಎನ್) ಪೊಲೀಸ್ ಠಾಣೆಯ ಮಹೇಶ್ (43). ಮಹೇಶ್ ಪರವಾಗಿ ಲಂಚ ಪಡೆಯುತ್ತಿದ್ದ ಆತನ ಸ್ನೇಹಿತನನ್ನು ಸಹ ಪೊಲೀಸರು ಬಂಧಿಸಿದ್ದರು.
ರಾಯಚೂರಲ್ಲೂ ಲೋಕಾಯುಕ್ತ ದಾಳಿ : ಲೋಕೋಪಯೋಗಿ ಇಲಾಖೆ ಅಧಿಕಾರಿ ಜಿ.ಎನ್. ಪ್ರಕಾಶ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿರುವ ಕೆಲವು ದಿನಗಳಿಂದೆ ಘಟನೆ ನಡೆದಿತ್ತು. ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿನ ಆರ್. ಆರ್. ಕಾಲೋನಿಯಲ್ಲಿನ ನಿವಾಸದ ಮೇಲೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಮಾನ್ವಿ ,ರಾಯಚೂರಿನಲ್ಲಿ ಲೋಕೋಪಯೋಗಿ ಇಲಾಖೆ ಎಇಇ ಆಗಿ ಪ್ರಕಾಶ್ ಕಾರ್ಯನಿರ್ವಹಿಸಿದ್ದು, ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಲೋಕಾಯುಕ್ತ ದಾಳಿ ನಡೆದಿದೆ ಎಂದು ಮೂಲಗಳು ಖಚಿತ ಪಡಿಸಿದ್ದವು. ಇದರೊಂದಿಗೆ ರಾಯಚೂರು ಜಿಲ್ಲೆ ನಗರ ಮತ್ತು ಗ್ರಾಮೀಣ ಯೋಜನಾ ಘಟಕದ ಸಹಾಯಕ ನಿರ್ದೇಶಕರ ಕಚೇರಿ, ನಿವಾಸ ಹಾಗೂ ಅವರಿಗೆ ಸಂಬಂಧಿಸಿದ ಫಾರ್ಮ್ ಹೌಸ್ ಮೇಲೂ ಲೋಕಾಯುಕ್ತ ದಾಳಿ ನಡೆದಿತ್ತು.
ಇದನ್ನೂ ಓದಿ : ಆರೋಪಿಗೆ ನೆರವಾಗಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಹೆಡ್ ಕಾನ್ಸ್ಟೇಬಲ್ ಲೋಕಾಯುಕ್ತ ಬಲೆಗೆ