ಶಿವಮೊಗ್ಗ: ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಪತ್ನಿ ಜಯಲಕ್ಷ್ಮಿ ಜೊತೆ ಆಗಮಿಸಿ ಶಿವಮೊಗ್ಗ ಜಿಲ್ಲಾ ಆಯುರ್ವೇದ ಬೋಧನಾಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಪಡೆದುಕೊಂಡರು.
ಕೋವಿಡ್ ರೋಗ ಪ್ರಪಂಚದ ಜನರನ್ನು ಬಾಧಿಸಿತ್ತು. ಲಸಿಕೆ ಕಂಡು ಹಿಡಿದ ಭಾರತೀಯ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಲಸಿಕೆ ಪಡೆದೆ, ಯಾವುದೇ ನೋವಾಗಲಿಲ್ಲ ಎಂದು ಸಚಿವರು ಹೇಳಿದರು.
ನಿನ್ನೆಯಿಂದ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತಿದೆ. ಲಸಿಕೆ ಪಡೆದರೆ ಏನಾದರೂ ಸಮಸ್ಯೆ ಆಗುತ್ತದೆ ಎಂಬ ಭಾವನೆ ಬಹಳ ಜನರಲ್ಲಿತ್ತು. ಆದರೆ, ನಾನು ಇಲ್ಲಿಗೆ ಬಂದು ಲಸಿಕೆ ಪಡೆದುಕೊಂಡೆ. ನನಗೆ ಲಸಿಕೆ ಹಾಕಿದ ಅನುಭವವೇ ಆಗಲಿಲ್ಲ. ಸ್ವಲ್ಪವೂ ನೋವಾಗಲಿಲ್ಲ ಎಂದರು.
ಇದನ್ನೂ ಓದಿ: ಕೊರೊನಾ ಲಸಿಕೆ ಪಡೆದ ಪರಿಷತ್ ಉಪ ಸಭಾಪತಿ ಎಂ.ಕೆ ಪ್ರಾಣೇಶ್ ದಂಪತಿ
ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ, ಖಾಸಗಿ ಆಸ್ಪತ್ರೆಯಲ್ಲಿ ಹಣ ನಿಗದಿ ಮಾಡಲಾಗಿದೆ. ಸದ್ಯ 3 ತಿಂಗಳು ಲಸಿಕಾ ಅಭಿಯಾನ ನಡೆಯಲಿದೆ. ಲಸಿಕೆ ಪಡೆಯಲು 3 ತಿಂಗಳು ಅವಧಿಯಿದೆ ಎಂದು ತತ್ಸಾರ ಮಾಡದೆ, ಎಲ್ಲರೂ ಅದಷ್ಟು ಬೇಗ ಬಂದು ಲಸಿಕೆ ಪಡೆಯಬೇಕು ಎಂದು ಸಚಿವರು ಕರೆ ನೀಡಿದರು.
'ಬಿ.ಸಿ.ಪಾಟೀಲ್ ಮನೆಯಲ್ಲಿಯೇ ಲಸಿಕೆ ಪಡೆದಿದ್ದು ತಪ್ಪೇನೂ ಇಲ್ಲ'
ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಅವರ ಪತ್ನಿ ಪಾಟೀಲರ ಮನೆಯಲ್ಲಿಯೇ ಲಸಿಕೆ ಪಡೆದಿದ್ದನ್ನು ದೊಡ್ಡದು ಮಾಡಬೇಡಿ. ಅವರು ಆಸ್ಪತ್ರೆಯಲ್ಲಿ ಪಡೆದ್ರಾ? ಮನೆಯಲ್ಲಿ ಪಡೆದ್ರಾ? ಇದು ಮುಖ್ಯವಲ್ಲ. ಲಸಿಕೆ ಪಡೆಯುವುದು ಮುಖ್ಯವಾಗಿದೆ ಎಂದರು.
ಪಿಎಂ, ಸಿಎಂ, ಮಂತ್ರಿ ಯಾರೇ ಆಗಲಿ ಎಲ್ಲರೂ ಲಸಿಕೆ ಪಡೆಯುವುದು ಮುಖ್ಯ ಎಂದು ಅವರು ತಿಳಿಸಿದರು.