ಶಿವಮೊಗ್ಗ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ನಡೆಸಿರುವುದನ್ನು ಕೆಪಿಸಿಸಿ ವಕ್ತಾರ ಕೆ.ಬಿ.ಪ್ರಸನ್ನ ಕುಮಾರ್ ಶಿವಮೊಗ್ಗದಲ್ಲಿ ಖಂಡಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿರುವುದು ದುರದೃಷ್ಟಕರ ಎಂದರು. ಶಿರಾ ಹಾಗೂ ರಾಜರಾಜೇಶ್ವರಿ ನಗರದ ಉಪ ಚುನಾವಣೆಯಲ್ಲಿ ನೈತಿಕವಾಗಿ ಗೆಲ್ಲಲು ಆಗದ ಬಿಜೆಪಿಯವರು, ಸಿಬಿಐ ಅಧಿಕಾರಿಗಳನ್ನು ಬಿಟ್ಟು ದಾಳಿ ನಡೆಸಿದ್ದಾರೆ. ಇದು ಬಿಜೆಪಿಯ ಅಧಃಪತನವನ್ನು ಸೂಚಿಸುತ್ತದೆ ಎಂದರು. ಬಿಜೆಪಿಯವರು ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿಬಿಐ ದಾಳಿ ನಡೆಸಿದ್ದಾರೆ. ಚುನಾವಣೆಯಲ್ಲಿ ಎರಡು ಕ್ಷೇತ್ರದ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ರು.
ಬಿಜೆಪಿಗೆ ಕಾಂಗ್ರೆಸ್ ಗೆ ಬೈಯ್ಯದೇ ಹೋದರೆ ತಿಂದ ಅನ್ನ ಕರಗುವುದಿಲ್ಲ:
ಬಿಜೆಪಿಯವರು ಸುಳ್ಳನ್ನೇ ಪದೇ ಪದೆ ಹೇಳಿ ಅದನ್ನೇ ಸತ್ಯವನ್ನಾಗಿಸುತ್ತಾರೆ. ಅದೇ ರೀತಿ ಈ ಕೃಷಿ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ ದೇಶದ ಆರ್ಥಿಕ ಸ್ಥಿತಿಯ ಮೇಲೆ ಗದಾಪ್ರಹಾರ ಮಾಡ್ತಾ ಇದ್ದಾರೆ. ಈ ಕುರಿತು ಕಾಂಗ್ರೆಸ್ ವಿರೋಧ ಮಾಡಿದ್ದಕ್ಕೆ ಕಾಂಗ್ರೆಸ್ ಅನ್ನು ದೇಶದ್ರೋಹಿ ಎಂದು ಬಿಂಬಿಸಲಾಗುತ್ತಿದೆ.
ಕೃಷಿ ಕಾಯ್ದೆಯ ಮೂಲಕ ಕಾರ್ಪೊರೇಟ್ ವಲಯಕ್ಕೆ ಸಹಾಯ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ, ಇದು ಖಂಡನೀಯ. ಕೃಷಿ ಕಾಯ್ದೆಯ ಮೂಲಕ ದೇಶದ ರೈತರಿಗೆ ಅನುಕೂಲವಾಗಲಿದೆ ಎಂದು ಬಿಜೆಪಿ ಸುಳ್ಳು ಹೇಳುತ್ತಿದೆ. ಇದು ದೇಶದ ಆರ್ಥಿಕ ಸ್ಥಿತಿಯ ಮೇಲೆ ಖಂಡಿತ ಪರಿಣಾಮ ಬಿರುತ್ತದೆ. ಕೃಷಿ ಕಾಯ್ದೆಯ ಬಗ್ಗೆ ಸಚಿವ ಈಶ್ವರಪ್ಪ ಹಾಗೂ ಸಂಸದ ರಾಘವೇಂದ್ರ ಅವರು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದ್ರು. ಇದೇ ವೇಳೆ, ಕಾಂಗ್ರೆಸ್ ಬಗ್ಗೆ ಹೇಳಿಕೆ ನೀಡಿದರ ಬಗ್ಗೆ ಕ್ಷಮೆ ಕೇಳಬೇಕೆಂದು ಕೆ.ಬಿ.ಪ್ರಸನ್ನ ಕುಮಾರ್ ಆಗ್ರಹಿಸಿದರು. ಈ ವೇಳೆ, ಯೋಗೀಶ್ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ಹಾಜರಿದ್ದರು.