ಶಿವಮೊಗ್ಗ: ಸಿದ್ದರಾಮಯ್ಯ ಜನಸ್ಪಂದನ ಕಾರ್ಯಕ್ರಮವನ್ನು ಟೀಕಿಸುವ ಮೊದಲು ಸಿದ್ದರಾಮೋತ್ಸವ ಕಾರ್ಯಕ್ರಮದ ಲೆಕ್ಕ ನೀಡಲಿ. ಯಾರ್ಯಾರು ಎಷ್ಟೆಷ್ಟು ಕೊಟ್ಟಿದ್ದಾರೆ. ಜನ ಕರೆಸಲು, ಬಸ್ಗೆ ಮತ್ತೆ ಯಾವುದಕ್ಕೆ ಎಷ್ಟು ಖರ್ಚು ಮಾಡಲಾಗಿದೆ ಎಂಬುದನ್ನು ತಿಳಿಸಲಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದ್ದಾರೆ.
ಶಿವಮೊಗ್ಗದ ಗಾಂಧಿ ನಗರ ಬಡಾವಣೆಯಲ್ಲಿ ಮಹಾನಗರ ಪಾಲಿಕೆವತಿಯಿಂದ ನಡೆಯುವ 3 ಕೋಟಿ ವೆಚ್ಚದ ನೂತನ ಸಂಕಿರ್ಣದ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮೊನ್ನೆ ಮಂಗಳೂರಿಗೆ ಪ್ರಧಾನಿ ಮೋದಿ ಬಂದಾಗ ಜನಸಾಗರವೇ ಸೇರಿತ್ತು. ಇಂದು ಜನಸ್ಪಂದನವು ಯಶಸ್ವಿಯಾಗಿ ನಡೆಯುತ್ತಿದೆ. ಇದನ್ನು ನೋಡಲಾಗದೇ ಸಿದ್ದರಾಮಯ್ಯ ಮಾತಾಡುತ್ತಿದ್ದಾರೆ. ನಾವು ಚುನಾವಣೆ ಬರುವವ ಇಂತಹ ಇನ್ನಷ್ಟು ಕಾರ್ಯಕ್ರಮಗಳನ್ನು ಮಾಡುತ್ತೇವೆ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಇನ್ನು ಶಾಂತಿ ನೆಲೆಸುತ್ತದೆ : ನಿನ್ನೆ ಶಿವಮೊಗ್ಗದಲ್ಲಿ ಹಿಂದು ಸಂಘಟನಾ ಮಹಾಮಂಡಳದ ಗಣಪತಿಯ ರಾಜಬೀದಿ ಉತ್ಸವ ಶಾಂತಿಯುತವಾಗಿ ನಡೆದಿದೆ. ನಾನು ಶಿವಮೊಗ್ಗದಲ್ಲಿಯೇ ಹುಟ್ಟಿ ಬೆಳೆದವನು, ನಾನು ಹಿಂದೆದೂ ನೋಡದ ಜನ ಸಾಗರ ನೋಡಿದೆ. ಮಹಿಳೆಯರು, ಯುವತಿಯರು ಮೆರವಣಿಗೆಯಲ್ಲಿ ಭಾಗಿಯಾಗಿದ್ದು, ನೋಡಿ ಖುಷಿಯಾಗಿದೆ. ಇನ್ನು ಮುಂದೆ ಇದೇ ರೀತಿ ಶಾಂತಿಯುತವಾಗಿ ನಡೆಯುತ್ತದೆ. ಶಾಂತಿ ಕದಡುವವರಿಗೆ ತಕ್ಕ ಪಾಠ ಕಲಿಸಲಾಗಿದೆ ಎಂದರು.
ಇದನ್ನೂ ಓದಿ : ಜನಸ್ಪಂದನ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ಎಂಟಿಬಿ, ವಿಶ್ವನಾಥ್