ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಮತ್ತು ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ವಿವಿಧ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ಅಧಿಕಾರಿಗಳ ಜೊತೆ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಇಂದು ನಗರದ ಬಿವಿಬಿ ಕಾಲೇಜಿನಲ್ಲಿ ಸಭೆ ನಡೆಸಿದರು.
ಸಭೆ ಬಳಿಕ ಮಾತನಾಡಿ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, "ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ಜೊತೆ ಎರಡು ಗಂಟೆ ಸುರಕ್ಷತಾ ಕ್ರಮ ತೆಗೆದುಕೊಳ್ಳುವ ಬಗ್ಗೆ ಸಮಾಲೋಚನಾ ಸಭೆ ನಡೆಸಲಾಯಿತು. ಸಭೆಯಲ್ಲಿ ಸುರಕ್ಷಿತವಾಗಿ ಹಣವನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಕೊಂಡೊಯ್ಯುವುದಕ್ಕೆ ಏನೇನು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ಸೆಕ್ಯೂರಿಟಿ ಆಡಿಟ್ ರೀತಿ ಮಾಡಲಾಯಿತು. ಸಭೆಯಲ್ಲಿ 250ಕ್ಕೂ ಹೆಚ್ಚು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಅವರಿಗೆ ಆರ್ಬಿಐ ಗೈಡ್ಲೈನ್ಸ್ ಪ್ರಕಾರ, ಏನೆಲ್ಲಾ ನಿಯಮಗಳನ್ನು ಪಾಲಿಸಬೇಕು" ಎಂಬ ಬಗ್ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
"ರಾಜ್ಯದಲ್ಲಿ ಇತ್ತೀಚಿಗೆ ನಡೆದ ಎರಡು ದರೋಡೆ ಪ್ರಕರಣಗಳಿಂದಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಣ ಕೊಂಡೊಯ್ಯುವಾಗ ಭದ್ರತೆ ಇರಬೇಕು ಮತ್ತು ನಮ್ಮ ಹಿರಿಯ ಅಧಿಕಾರಿಗಳು ಪೊಲೀಸರು ಹೆಚ್ಚು ಇರಬೇಕು ಹಾಗೂ ಚೆಕ್ಪೋಸ್ಟ್ ಗಳನ್ನು ಹೆಚ್ಚು ಹಾಕಬೇಕು, ಹಣ ಕೊಂಡೊಯ್ಯುವ ಸಂದರ್ಭದಲ್ಲಿ ಪೊಲೀಸರು ಹೇಗೆ ಭದ್ರತೆ ಒದಗಿಸಬೇಕು ಎಂಬ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಅಂತಹ ಘಟನೆಗಳನ್ನು ಧಾರವಾಡ ಜಿಲ್ಲೆಯಲ್ಲಿ ನಡೆಯದಂತೆ ಮಾಡಲು ಯಾವೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಸಭೆಯಲ್ಲಿ ಚರ್ಚಿಸಲಾಯಿತು" ಎಂದರು.
ಅನುಮಾನಾಸ್ಪದವಾಗಿ ಕಂಡುಬಂದರೆ ಮಾಹಿತಿ ನೀಡಿ : "ದರೋಡೆ ಘಟನೆಗಳ ಹಿನ್ನೆಲೆ ಪೊಲೀಸ್ ಅಧಿಕಾರಿಗಳು ಅವರವರ ಠಾಣಾ ವ್ಯಾಪ್ತಿಯಲ್ಲಿ ಸಭೆಗಳನ್ನು ಮಾಡಿದ್ದಾರೆ. ಬ್ಯಾಂಕ್ಗಳು ಸಹ ಪೂರಕ ಸಿದ್ಧತೆ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ. ಖಾಸಗಿ ಏಜೆನ್ಸಿ ಹಣ ಕೊಂಡೊಯ್ಯುವಾಗ ಹೆಚ್ಚು ಭದ್ರತೆಯಿಂದ ಹೋಗುವುದು, ಮುಂಜಾಗ್ರತೆಯಿಂದ ಹೋಗುವುದು ಮುಖ್ಯ. ಯಾರಾದರೂ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರೆ ಅಂತಹವರ ಬಗ್ಗೆ ಮಾಹಿತಿ ನೀಡಿಬೇಕು" ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ, ಅಪರಾಧಕ್ಕೂ ಮುನ್ನವೇ ಗೊತ್ತಾದರೆ ಆಗಲು ಬಿಡಲ್ಲ: ಜಿ.ಪರಮೇಶ್ವರ್
ಇದನ್ನೂ ಓದಿ: ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ: ಎಲ್ಲ ಟೋಲ್ಗಳಲ್ಲಿ ತಪಾಸಣೆ ಮಾಡುವಂತೆ ಸಿಎಂ ಸೂಚನೆ