ಶಿವಮೊಗ್ಗ: ನಾನು ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ಯಾವುದೇ ನಿಶ್ಚಯವಾಗಿಲ್ಲ ಎಂದು ಕೆ ಎಸ್ ಈಶ್ವರಪ್ಪನವರ ಪುತ್ರ ಕೆ ಈ ಕಾಂತೇಶ್ ಸ್ಪಷ್ಟಪಡಿಸಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷವಾಗಿದೆ. ಪಕ್ಷದಲ್ಲಿ ಯಾರು ಚುನಾವಣೆಗೆ ನಿಲ್ಲಬೇಕು, ಯಾರು ನಿಲ್ಲಬಾರದು ಎಂದು ಯಾವುದೇ ಚರ್ಚೆ ಪ್ರಾರಂಭವಾಗಿಲ್ಲ. ನಾನು ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ. ಮುಂದೆಯೂ ದುಡಿಯುತ್ತೇನೆ. ನಮ್ಮ ಪಕ್ಷ ಹಾಗೂ ನಮ್ಮ ತಂದೆಯವರು ಏನ್ ತೀರ್ಮಾನ ಮಾಡುತ್ತಾರೋ ಅದಕ್ಕೆ ನಾನು ಬದ್ದನಾಗಿರುತ್ತೇನೆ ಎಂದರು.
ಹಿಂದೆಯೂ ನಾನಾಗಲಿ ನಮ್ಮ ತಂದೆಯವರಾಗಲಿ ರಾಣೆಬೆನ್ನೂರಿನಿಂದ ಸ್ಪರ್ಧೆ ಕುರಿತು ಯಾವುದೇ ಮಾತುಕತೆ ನಡೆದಿರಲಿಲ್ಲ. ಆದರೆ, ಮಾಧ್ಯಮದಲ್ಲಿ ನನ್ನ ಹೆಸರು ನೋಡಿ ಆಶ್ಚರ್ಯ ಆಯಿತು. ಆದರೆ, ಕಾಂತೇಶ ಯಾರು ಅಂತ ರಾಜ್ಯದ ಜನತೆಗೆ ಮಾಧ್ಯಮದವರು ತೋರಿಸಿದ್ದಕ್ಕೆ ಧನ್ಯವಾದಗಳು ಎಂದರು. ಹಿಂದೆಯೂ ಟಿಕೇಟ್ ಕೇಳಿಲ್ಲ, ಈಗಲೂ ಸಹ ಕೇಳಿಲ್ಲ, ಮುಂದಿನ ದಿನಗಳಲ್ಲಿ ಪಕ್ಷ ಏನು ನಿರ್ಣಯ ತೆಗೆದುಕೊಳ್ಳುತ್ತೆದೆಯೋ ಅದನ್ನು ಮಾಡುತ್ತೇನೆ ಎಂದರು.
ನಾನು ರಾಜಕೀಯದಲ್ಲಿ ಸಕ್ರೀಯವಾಗಿರುವ ತನಕ ಕಾಂತೇಶ್ ರಾಜಕೀಯಕ್ಕೆ ಬರುವುದು ಬೇಡ ಎಂದು ಹೇಳಿದ್ದರು. ಅದಕ್ಕೆ ನಮ್ಮ ತಂದೆ ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ದ ಎಂದರು. ನಮ್ಮ ತಂದೆ ಹಾಗೂ ಯಡಿಯೂರಪ್ಪ, ಪಕ್ಷದ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ದ ಎನ್ನುವ ಮೂಲಕ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು.
ಇದೇ ವೇಳೆ, ಮಾತನಾಡಿದ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಸದಸ್ಯರಾದ ಸುರೇಶ್ ಬಾಳೆಗುಂಡಿ ಅವರು ಡಿಸೆಂಬರ್ 16 ರಂದು ಈಶ್ವರಪ್ಪನವರು ಪುನಃ ಮಂತ್ರಿಯಾಗಲಿದ್ದಾರೆ ಎಂದರು.
ಓದಿ: ಬಿಎಸ್ವೈ - ಬೊಮ್ಮಾಯಿ ನಡುವೆ ಅಸಮಾಧಾನದ ಗುಸು ಗುಸು: ಗುರು ಶಿಷ್ಯರ ನಡುವೆ ಮನಸ್ತಾಪವಾಗಿರುವುದು ನಿಜವೇ..?