ಶಿವಮೊಗ್ಗ: ನಾಡಿಗೆ ಬೆಳಕು ನೀಡಿದ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕು ಪತ್ರ ಹಾಗೂ ಮಲೆನಾಡಿನ ವಿವಿಧ ಸಮಸ್ಯೆಗಳನ್ನು ಪರಿಹರಿಸ ಬೇಕೆಂದು ರಾಜ್ಯ ಕಾಂಗ್ರೆಸ್ ಮಲೆನಾಡು ಜನಾಕ್ರೋಶ ಪಾದಯಾತ್ರೆ ಹಾಗೂ ಸಮಾವೇಶವನ್ನು ಸೋಮವಾರ ನಡೆಸಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಾದಯಾತ್ರೆಯು ಸೋಮವಾರ ಬೆಳಗ್ಗೆ 9 ಗಂಟೆಗೆ ಆಯನೂರು ಗ್ರಾಮದಿಂದ ಪ್ರಾರಂಭವಾಗುತ್ತದೆ.
ಆಯನೂರಿನಿಂದ ಶಿವಮೊಗ್ಗದ ಎನ್.ಇ.ಎನ್ ಮೈದಾನದ ತನಕ ಪಾದಯಾತ್ರೆ ನಡೆಯಲಿದೆ. ಅಂದು ಸಂಜೆ 4 ಗಂಟೆಗೆ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಪರಿಷತ್ನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಜಿಲ್ಲೆಯ ಎಲ್ಲ ಕಾಂಗ್ರೆಸ್ ಮುಖಂಡರು ಹಾಜರು ಇರಲಿದ್ದಾರೆ ಎಂದರು.
ನಾಡಿಗೆ ಬೆಳಗು ನೀಡಿದ ಶರಾವತಿ ಸಂತ್ರಸ್ತರು ಈಗಲೂ ಒಂದು ನೆಲೆ ಕಾಣದೆ ಪರದಾಡುವಂತಾಗಿದೆ. ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣಕ್ಕೆ ತಮ್ಮ ನೆಲೆಯನ್ನು ಕಳೆದು ಕೊಂಡವರಿಗೆ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿದ್ದ ಕಾಗೋಡು ತಿಮ್ಮಪ್ಪ ಅರಣ್ಯ ಭೂಮಿಯನ್ನು ಕಂದಾಯ ಭೂಮಿಯನ್ನಾಗಿಸಿ 1,500 ಜನಕ್ಕೆ ಹಕ್ಕು ಪತ್ರವನ್ನು ನೀಡಿದ್ದರು.
ನಂತರ ಎರಡನೇ ಹಂತಕ್ಕೆ ಸುಮಾರು 2 ಸಾವಿರ ಜನರಿಗೆ ಹಕ್ಕು ಪತ್ರ ನೀಡಲು ಸಿದ್ಧವಾಗಿತ್ತು. ಆದರೆ, ಪರಿಸರ ಪ್ರೇಮಿ ಹೊಸನಗರದ ಗಿರೀಶ್ ಎಂಬುವರು ಹೈಕೋರ್ಟ್ನಲ್ಲಿ ಕೇಸು ದಾಖಲಿಸಿ ಅರಣ್ಯ ಭೂಮಿಯಿಂದ ಕಂದಾಯ ಭೂಮಿಯನ್ನಾಗಿಸಿದ್ದನ್ನು ಪ್ರಶ್ನಿಸಿದರು.
ಇದರ ಕುರಿತು ರಾಜ್ಯ ಸರ್ಕಾರ ಸರಿಯಾಗಿ ವಾದ ಮಾಡದ ಕಾರಣ ಹೈಕೋರ್ಟ್ ಕಂದಾಯ ಭೂಮಿ ಬದಲಾವಣೆ ಮಾಡಿದನ್ನು ರದ್ದುಗೊಳಿಸಿದೆ. ಇದರಿಂದ ಕೆಪಿಸಿಸಿಯು ಶರಾವತಿ ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಸೇರಿದಂತೆ ಶರಾವತಿ, ಚಕ್ರ ಸಾವೆಹಕ್ಲು, ವರಾಹಿ ಸಂತ್ರಸ್ತರ ಪರವಾಗಿ ಪಾದಯಾತ್ರೆ ಎಂದು ತಿಳಿಸಿದ್ದಾರೆ.
ಕಳೆದ 15 ದಿನಗಳ ಹಿಂದೆ ಈಡಿಗರ ಭವನದಲ್ಲಿ ಬಿಜೆಪಿ ನಡೆಸಿದ ಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಈ ಸಮಸ್ಯೆಯನ್ನು ಪರಿಹರಿಸುವುದಾಗಿ ಹೇಳಿದ್ದರು. ಆದರೆ, ಇನ್ನೂ ಈ ಬಗ್ಗ ಯಾವುದೇ ಮಾತನಾಡುತ್ತಿಲ್ಲ. ಅಲ್ಲದೇ ನಿನ್ನೆ ಸಿಎಂ ಡಿಸಿ ಅವರಿಂದ ವರದಿ ತರಿಸಿಕೊಂಡು ಅದನ್ನು ಕೇಂದ್ರಕ್ಕೆ ಕಳುಹಿಸುವುದಾಗಿ ತಿಳಿಸಿದ್ದಾರೆ. ಬಿಜೆಪಿರವರು ಸಂತ್ರಸ್ತರ ಮೂಗಿಗೆ ತುಪ್ಪ ಹಚ್ಚುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಈ ವೇಳೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್, ಜನಾಕ್ರೋಶನ ಸಂಚಾಲಕ ಆರ್.ಪ್ರಸನ್ನ ಕುಮಾರ್, ಕೆ.ಬಿ.ಪ್ರಸನ್ನ ಕುಮಾರ್, ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಸೇರಿದಂತೆ ಇತರರು ಹಾಜರಿದ್ದರು.
ಇದನ್ನೂ ಓದಿ: ಬಿಜೆಪಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ: ವಿಪಕ್ಷ ನಾಯಕ ಸಿದ್ದರಾಮಯ್ಯ