ಶಿವಮೊಗ್ಗ : ಅಪ್ಪ ಮಾಡಿದ ಆಸ್ತಿ ಹಂಚಿಕೊಳ್ಳುವಾಗ ಬಡಿದಾಡುತ್ತಾರೆ. ಸಾರ್ವಜನಿಕವಾಗಿ ಇಷ್ಟು ದೊಡ್ಡ ಆಡಳಿತ ನಡೆಸುತ್ತಿರುವಂತಹ ವ್ಯವಸ್ಥೆಯಲ್ಲಿ ಅಧಿಕಾರ ಹಂಚಿಕೆ ವೇಳೆ ಸ್ವಾಭಾವಿಕವಾಗಿ ಸಚಿವ ಸ್ಥಾನ ಮತ್ತು ಇಂತಹುದೇ ಖಾತೆ ಬೇಕೆಂದು ಕೇಳೋದು ತಪ್ಪಲ್ಲ ಅಂತಾ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಕೆಲವರು ಮಂತ್ರಿಮಂಡಲ ವಿಸ್ತರಣೆಯಲ್ಲಿ ತಮ್ಮನ್ನು ಮಂತ್ರಿ ಮಾಡಿ ಎಂಬ ಲಾಬಿ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರಕ್ಕೆ ಬಹಳ ದಿನಗಳಿಂದ ಬಹುಮತ ಬೇಕು ಅಂತಾ ನಿರೀಕ್ಷೆ ಮಾಡುತ್ತಿದ್ದರು. ಈಗ ಬಹುಮತ ಬಂದಿದೆ. ಸರ್ಕಾರಕ್ಕೆ ಬಹುಮತ ಬರುವಂತೆ ಮಾಡಿದ ಜೆಡಿಎಸ್,ಕಾಂಗ್ರೆಸ್ನಿಂದ ಬಂದವರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಅಂತಾ ಕೇಂದ್ರದ ನಾಯಕರು ಮತ್ತು ಸಿಎಂ ತೀರ್ಮಾನ ಮಾಡಿದ್ದಾರೆ. ನಾಳೆ ಬೆಳಗ್ಗೆ 10:30ಕ್ಕೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದರು.
ನಾಳೆ 13 ಶಾಸಕರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಯಾರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಅಂತಾ ಸಿಎಂ ಚಿಂತನೆ ನಡೆಸುತ್ತಾರೆ. ತಮಗೆ ಅಧಿಕಾರ ಬೇಕೆಂದು ಕೆಲವರು ಕೇಳಿದ್ದಾರೆ, ಕೇಳುವುದರಲ್ಲಿ ತಪ್ಪಿಲ್ಲ. ಅಲ್ಲೊಂದು-ಇಲ್ಲೊಂದು ಸಮಸ್ಯೆ ಇದೆ. ಅದನ್ನ ಸಿಎಂ ಬಗೆಹರಿಸುತ್ತಾರೆ. ಈಗ ಚುನಾವಣೆಯಲ್ಲಿ ಗೆದ್ದವರಿಗೆ ಮಾತ್ರ ಮಂತ್ರಿ ಸ್ಥಾನ ಅಂತಾ ಹೇಳಿದ್ದಾರೆ. ಸೋತವರಿಗೆ ಸೂಕ್ತ ಸ್ಥಾನ ನೀಡಲಾಗುವುದು ಅಂತಾ ಸ್ವತಃ ಸಿಎಂ ಭರವಸೆ ನೀಡಿದ್ದಾರೆ ಎಂದರು.
ಕೊರೊನಾ ಬಗ್ಗೆ ಜಿಲ್ಲೆಯ ಜನ ಭಯಪಡಬೇಡಿ: ಕೊರೊನಾ ವೈರಸ್ ಬಗ್ಗೆ ಜನ ಭಯಪಡುವ ಅವಶ್ಯಕತೆ ಇಲ್ಲ. ನಮ್ಮ ಜಿಲ್ಲೆಯಲ್ಲಿ ಶೇ.1ರಷ್ಟು ಭಯವಿಲ್ಲ. ಆರೋಗ್ಯ ಸಚಿವರ ಆದೇಶದ ಮೇರೆಗೆ ಮೆಗ್ಗಾನ್ನಲ್ಲಿ ಪ್ರತ್ಯೇಕ ವಾರ್ಡ್ ತೆರೆಯಲಾಗುವುದು. ಕೆಎಫ್ಸಿಯ ಸಂಶೋಧನಾ ಘಟಕವನ್ನ ಸಾಗರದಲ್ಲಿ ಪ್ರಾರಂಭಿಸಬೇಕು ಎಂಬುದರ ಬಗ್ಗೆ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ. ಮೃತರಿಗೆ ಪರಿಹಾರ ನೀಡುವ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ಸಿಕ್ಕ ನಂತರ ಪ್ರತಿಕ್ರಿಯಿಸುವೆ ಎಂದರು.