ಶಿವಮೊಗ್ಗ: ಸ್ವಂತ ಕಟ್ಟಡದ ಕೊರತೆ, ಶೌಚಗೃಹವಿಲ್ಲದೇ ವಿದ್ಯಾರ್ಥಿಗಳ ಪರದಾಟ, ಒಂದೇ ಕೊಠಡಿಯಲ್ಲಿ ಎರಡು ತರಗತಿಗಳೊಂದಿಗೆ ಮುಖ್ಯ ಶಿಕ್ಷಕರ ಕಚೇರಿ. ಇದು, ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ಹೃದಯ ಭಾಗದಲ್ಲಿರುವ ಮೌಲಾನ ಆಜಾದ್ ಮಾದರಿ ಶಾಲೆಯ ದುಃಸ್ಥಿತಿ.
ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ರಾಜ್ಯದಲ್ಲಿ 2018 ಮತ್ತು 19ರಲ್ಲಿ ಒಟ್ಟು 200 ಶಾಲೆಗಳನ್ನು ಆರಂಭಿಸಿ, ಅಲ್ಪಸಂಖ್ಯಾತರ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ದೊರಕಿಸಿಕೊಡುವ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತರಲಾಯಿತು. ಈ ಪೈಕಿ ಜಿಲ್ಲೆಯಲ್ಲಿ 6 ಶಾಲೆಗಳು ಮಂಜೂರಾಗಿದ್ದು, ತಾಲೂಕಿನ ಒಂದು ಶಾಲೆ ಆರಂಭವಾದರೂ ಆರಂಭದ ದಿನದಿಂದಲೂ ಸ್ವಂತ ಕಟ್ಟಡವಿಲ್ಲದೇ, ಮೂಲ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಾ ಸಾಗಿರುವುದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ.
ಮೂರು ಬಾರಿ ಸ್ಥಳಾಂತರ: 2018ರಲ್ಲಿ ಪಟ್ಟಣದ ಹೊಸಪೇಟೆ ಬಡಾವಣೆಯ ರಾಜೀವ ನಗರದಲ್ಲಿನ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಯಿತು. ನಂತರ ಪಟ್ಟಣದ ಚಿಕ್ಕಪೇಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಲಾಯಿತು. ಪ್ರಸ್ತುತ ಖಾಸಗಿ ಬಸ್ ನಿಲ್ದಾಣ ಸಮೀಪದ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯವರು ನೀಡಿದ ಎರಡು ಕೊಠಡಿಗಳಲ್ಲಿ ಶಾಲೆ ನಡೆಯುತ್ತಿದೆ.
ಆಸನದ ಕೊರತೆ: ಪ್ರಸ್ತುತ ಶಾಲೆಯಲ್ಲಿ 6ರಿಂದ 10ನೇ ತರಗತಿವರೆಗೆ 23 ವಿದ್ಯಾರ್ಥಿಗಳು ಹಾಗೂ 54 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 77 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ತರಗತಿಯಲ್ಲಿ 24 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಸೌಲಭ್ಯಗಳ ಕೊರತೆಯ ನಡುವೆಯೇ ಶೇ. 100ರ ಫಲಿತಾಂಶ ನೀಡುವ ಹೊಣೆ ಶಿಕ್ಷಕರದ್ದಾಗಿದೆ.
ಮಾತ್ರವಲ್ಲದೇ ಒಬ್ಬರು ಪ್ರಭಾರ ಮುಖ್ಯ ಶಿಕ್ಷಕರಿದ್ದು, 6 ಮಂದಿ ಅತಿಥಿ ಶಿಕ್ಷಕರ ಮೂಲಕ ಪಾಠ - ಪ್ರವಚನಗಳು ನಡೆಯುತ್ತಿದೆ. ಇರುವ ಎರಡು ಕೊಠಡಿಯಲ್ಲಿ ಎರಡೆರಡು ತರಗತಿ ನಡೆಯುತ್ತಿದೆ. ಮತ್ತೊಂದಡೆ ಒಂದೇ ಕೊಠಡಿಯಲ್ಲಿ ಎರಡು ತರಗತಿಯ ಜೊತೆಗೆ ಮುಖ್ಯ ಶಿಕ್ಷಕರ ಕಚೇರಿಯೂ ಕಾರ್ಯನಿರ್ವಹಿಸುತ್ತಿದೆ. ಉಳಿದಂತೆ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಯ ಕಾರಿಡಾರ್ ಗತಿಯಾಗಿದೆ.
ಮಾದರಿಯಾಗದ ಶಾಲೆ: ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಗೆ ಸ್ಥಳೀಯ ಶಾಸಕ ಎಸ್ ಕುಮಾರ್ ಬಂಗಾರಪ್ಪ ಅವರೇ ಅಧ್ಯಕ್ಷರಾಗಿದ್ದು, ಜಿಲ್ಲೆಯಲ್ಲಿ ಮಾದರಿ ಶಾಲೆಯನ್ನಾಗಿಸುವ ನಿಟ್ಟಿನಲ್ಲಿ ಸಾಕಷ್ಟು ಅವಕಾಶವಿತ್ತು. ಆದರೆ, ಜಿಲ್ಲೆಯಲ್ಲಿಯೇ ಮಾದರಿಯಾಗದ ಶಾಲೆ ಎನ್ನುವ ಅಪಖ್ಯಾತಿಗೆ ಒಳಗಾಗುವಂತಾಗಿದೆ.
ಶಾಲೆಯ ಪೋಷಕರು ಶಾಲೆಗೆ ನಿವೇಶನ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜವಾಗಿಲ್ಲ. ಇನ್ನು ಸರ್ವೇ ನಂ. 113ರಲ್ಲಿ ಯಾವುದೇ ಯೋಜನೆಗಳಿಗೆ ಕಾಯ್ದಿರಿಸದ ಪ್ರದೇಶವನ್ನು ಶಾಸಕರ ಗಮನಕ್ಕೆ ತಂದರೂ ಕಿಂಚಿತ್ತು ಗಮನ ನೀಡಲಿಲ್ಲ ಎನ್ನುವ ಆರೋಪ ಪೋಷಕರದ್ದಾಗಿದೆ.
ಶೌಚಗೃಹವಿಲ್ಲದೆ ಪರದಾಟ: ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೌಚಗೃಹವನ್ನೇ ಮೌಲಾನಾ ಅಜಾದ್ ಶಾಲೆಯ ವಿದ್ಯಾರ್ಥಿಗಳು ಬಳಕೆ ಮಾಡುತ್ತಿದ್ದಾರೆ. ಇರುವ ಎರಡು ಶೌಚಗೃಹವನ್ನು ಎರಡೆರಡು ಶಾಲೆಯ ವಿದ್ಯಾರ್ಥಿಗಳು ಒಮ್ಮೆಲೆ ಬಳಸಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿನಿಯರು ಮನೆಯಿಂದ ಶಾಲೆಗೆ ಆಗಮಿಸಿದ ನಂತರ ಶೌಚಗೃಹಕ್ಕೆ ತೆರಳುತ್ತಿಲ್ಲ.
ಸಂಜೆ ಮನೆಗೆ ತೆರಳಿದ ನಂತರವೇ ಶೌಚಗೃಹ ಬಳಸುತ್ತಿದ್ದಾರೆ. ಇದರಿಂದ ಓರ್ವ ವಿದ್ಯಾರ್ಥಿನಿ ಅನಾರೋಗ್ಯಕ್ಕೆ ಒಳಗಾಗಿ ಇದೀಗ ಚೇತರಿಸಿಕೊಂಡು ಶಾಲೆಗೆ ತೆರಳುತ್ತಿರುವುದಾಗಿ ಆ ವಿದ್ಯಾರ್ಥಿನಿಯ ಪೋಷಕರು ಅಳಲು ತೋಡಿಕೊಂಡಿದ್ದಾರೆ. ಇನ್ನು ಕೊಠಡಿ ಸಮಸ್ಯೆಯ ಪರಿಣಾಮ ಶಾಲೆಯ ವಿದ್ಯಾರ್ಥಿಗಳ ಬಿಸಿಯೂಟವೂ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೊಂದಿಗೆ ನಡೆಯುತ್ತಿದೆ.
ಮೂಲಸೌಲಭ್ಯ ಒದಗಿಸುವಂತೆ ಪೋಷಕರ ಒತ್ತಾಯ: ಪಟ್ಟಣದ ಹೃದಯ ಭಾಗದಲ್ಲಿ ಮೌಲಾನ ಆಜಾದ್ ಮಾದರಿ ಶಾಲೆ ಇದ್ದರೂ ಹಲವು ಸೌಲಭ್ಯಗಳ ಕೊರತೆ ಎದುರಿಸುವಂತಾಗಿದ್ದು, ಸಂಬಂಧಪಟ್ಟ ಇಲಾಖೆಯವರು ಹಾಗೂ ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ಶಾಲೆಗೆ ಸ್ವಂತ ಕಟ್ಟಡ ಮತ್ತು ಮೂಲ ಸೌಲಭ್ಯಗಳನ್ನು ಒದಗಿಸುವತ್ತ ಗಮನ ನೀಡಬೇಕು ಎನ್ನುವುದು ಸ್ಥಳೀಯರ ಹಾಗೂ ಪೋಷಕರ ಒತ್ತಾಯವಾಗಿದೆ.
"ಬಡ ಮತ್ತು ಮಧ್ಯಮ ವರ್ಗದ ಜನತೆ ತಮ್ಮ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ಶಿಕ್ಷಣ ಕೊಡಿಸಲು ಸಾಧ್ಯವಾಗದೇ, ಉಚಿತ ಶಿಕ್ಷಣದೊಂದಿಗೆ ಸರ್ಕಾರವೇ ಆರಂಭಿಸಿದ ಆಂಗ್ಲ ಮಾಧ್ಯಮ ಶಾಲೆಗೆ ಮಕ್ಕಳನ್ನು ಸೇರಿಸಿದ್ದೇವೆ. ಆದರೆ, ಹಲವಾರು ಮೂಲ ಸೌಲಭ್ಯಗಳ ಕೊರತೆ ಇದೆ. ಶಾಲೆಗೆ ಸ್ವಂತ ಕಟ್ಟಡವಿಲ್ಲದೆ, ಮೂರು ಭಾರಿ ಸ್ಥಳಾಂತರವಾಗಿದೆ.
ಶೌಚಗೃಹದ ಸಮಸ್ಯೆಯಿಂದ ವಿದ್ಯಾರ್ಥಿನಿಯರಲ್ಲಿ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿದ್ದು ಇದೆ. ಕೂಡಲೇ ಸಂಬಂಧಪಟ್ಟವರು ಇಲಾಖಾ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಶಾಲೆಗೆ ಸೌಕರ್ಯಗಳನ್ನು ಒದಗಿಸಲು ಗಮನ ನೀಡಬೇಕು' ಎನ್ನುತ್ತಾರೆ ಪೋಷಕರಾದ ಆಸೀಫ್ ಅತ್ತಾರ್.