ಶಿವಮೊಗ್ಗ: ಕಳೆದ ತಿಂಗಳು ನಡೆದ ಎಸ್ಎಸ್ಎಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸರಿಯಾದ ಸಮಯಕ್ಕೆ ತಲುಪಿಸಿದ ಇಬ್ಬರು ಕೆಎಸ್ಆರ್ಟಿಸಿ ಬಸ್ ಚಾಲಕರಿಗೆ ಸಾಗರದಲ್ಲಿ ಸನ್ಮಾನ ಮಾಡಲಾಯಿತು.
ರಾಜ್ಯ ಸರ್ಕಾರದ ಆದೇಶದನ್ವಯ ಹಾಗೂ ಜಿಲ್ಲಾಡಳಿತದ ಸೂಚನೆ ಮೇರೆಗೆ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಾಗರ ಘಟಕದಿಂದ ವಾಹನಗಳನ್ನು ನೀಡಲಾಗಿತ್ತು. ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬರುವಾಗ ಮಾರ್ಗ ಮಧ್ಯದಲ್ಲಿ ಮರ ಬಿದ್ದಿದ್ದನ್ನು ಕಂಡು ಚಾಲಕರಾದ ಡ್ಯಾನಿ ಫರ್ನಾಂಡಿಸ್ ಹಾಗೂ ಶಾಮರಾಜ್ಯ ಮರವನ್ನು ತೆರವುಗೊಳಿಸಿ ಮಕ್ಕಳನ್ನು ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದ್ದರು. ಇವರ ಕಾರ್ಯಕ್ಕೆ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತ ಪ್ರಶಂಸೆ ವ್ಯಕ್ತಪಡಿಸಿತ್ತು.
ಈ ಹಿನ್ನೆಲೆ ಶಿವಮೊಗ್ಗ ವಿಭಾಗದ ಮುಖ್ಯ ಭದ್ರತಾ ಅಧಿಕಾರಿ ಜಿ.ಎನ್.ಲಿಂಗರಾಜ್ ಸಾಗರ ಘಟಕದ ಈ ಇಬ್ಬರು ಚಾಲಕರಿಗೆ ಪ್ರಶಂಸನಾ ಪತ್ರ ನೀಡಿ, ಸನ್ಮಾನಿಸಿ ಗೌರವಿಸಿದರು.