ಶಿವಮೊಗ್ಗ: ಪತ್ರಕರ್ತರಿಗೆ ಗಿಫ್ಟ್ ವಿಚಾರವಾಗಿ ನಾನೇನು ಪ್ರತಿಕ್ರಿಯೆ ನೀಡಲ್ಲ. ಅದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಿಫ್ಟ್ ವಿಚಾರದ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಎಲ್ಲಾ ಹೇಳಿದ್ದಾರೆ. ಇದರ ಬಗ್ಗೆ ನಾನು ರಿಯಾಕ್ಟ್ ಮಾಡಲ್ಲ, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ನನಗೆ ಗೊತ್ತಿರುವ ಹಾಗೆ ಅದು ಸ್ವೀಟ್ ಬಾಕ್ಸ್, ಈ ರೀತಿಯ ಗಿಫ್ಟ್ಗಳನ್ನುಯಾವುದೇ ಸರ್ಕಾರ ಇರಲಿ, ಯಾವುದಾರೂ ಒಂದು ಸಂದರ್ಭದಲ್ಲಿ ಕೊಡ್ತಾರೆ. ಹಾಗೆ ಕೊಟ್ಟಿರಬಹುದೇನೋ, ನನಗೆ ಏನೂ ಅರಿವಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ಸ್ಪೆಕ್ಟರ್ ನಂದೀಶ್ ಹೃದಯಾಘಾತ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ಸಿಪಿಐ ಅನಾರೋಗ್ಯದಿಂದ ತೀರಿ ಹೋಗಿದ್ದಾರೆ. ನನಗೆ ಬಂದಿರುವ ಮಾಹಿತಿ ಪ್ರಕಾರ, ಅವರ ಆರೋಗ್ಯ ಸರಿ ಇರಲಿಲ್ಲ ಎಂದು ಗೃಹ ಸಚಿವರು ತಿಳಿಸಿದರು.
ವರ್ಗಾವಣೆಗೆ 70-80 ಲಕ್ಷ ರೂಪಾಯಿ ಕೊಟ್ಟು ಬರಬೇಕಿದೆ ಎನ್ನುವ ಎಂಟಿಬಿ ನಾಗರಾಜ್ ಆಡಿಯೋ ಹೇಳಿಕೆ ಬಗ್ಗೆ ಅವರೇ ಹೇಳಬೇಕು. ಲಂಚ ಕೊಟ್ಟಿರುವ ಬಗ್ಗೆ ನಿರ್ದಿಷ್ಟವಾಗಿ ಯಾರಾದರೂ ದೂರು ಕೊಟ್ಟರೆ ಪೊಲೀಸರಿಂದ ತನಿಖೆ ಮಾಡಿಸಬಹುದು ಎಂದು ಹೇಳಿದರು.
ಶಿವಮೊಗ್ಗದಲ್ಲಿನ ಗಲಾಟೆ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ಇಲ್ಲಿ ಕಾನೂನಿನ ಬಗ್ಗೆ ಭಯ ಇಲ್ಲದಿರುವಂತಹ ಕೆಲವು ಶಕ್ತಿಗಳಿವೆ. ಅವರನ್ನು ಕಾನೂನು ವ್ಯಾಪ್ತಿಗೆ ತಂದು ದಮನ ಮಾಡುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಹಿಂದೆ ಶಿವಮೊಗ್ಗ ರೌಡಿಗಳ ಟ್ರೈನಿಂಗ್ ಸೆಂಟರ್ ಆಗಿತ್ತು. ಈಗ ಕಡಿಮೆ ಆಗಿದೆ. ಎಲ್ಲಾ ರೀತಿಯಲ್ಲೂ ಮಟ್ಟ ಹಾಕಲು ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಇದಕ್ಕೆ ಸಾರ್ವಜನಿಕರು ಸಹ ಸಹಕಾರ ಕೊಡಬೇಕು ಎಂದರು.
ಇದನ್ನೂ ಓದಿ: ಪತ್ರಕರ್ತರಿಗೆ ಉಡುಗೊರೆ ಪ್ರಕರಣ ಕಾಂಗ್ರೆಸ್ ಟೂಲ್ ಕಿಟ್ ಭಾಗ: ಸಿಎಂ ಬೊಮ್ಮಾಯಿ