ಶಿವಮೊಗ್ಗ : ನಗರದಲ್ಲಿ ಹಾಫ್ ಹೆಲ್ಮೆಟ್ ವಿರುದ್ಧ ಅಭಿಯಾನವನ್ನು ಜಿಲ್ಲಾ ಪೊಲೀಸ್ ಇಲಾಖೆ ಮುಂದುವರೆಸಿದೆ. ಶುಕ್ರವಾರ ಟಿ.ಶೀನಪ್ಪ ಶೆಟ್ಟಿ ವೃತ್ತದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಹಾಫ್ ಹೆಲ್ಮೆಟ್ ವಿರುದ್ದ ಅಭಿಮಾನ ನಡೆಸಲಾಯಿತು.
ಎಸ್ಪಿ ಮಿಥುನ್ ಕುಮಾರ್ ತಾವೇ ರಸ್ತೆಯಲ್ಲಿ ನಿಂತು ದ್ವಿಚಕ್ರ ವಾಹನ ಸವಾರರು ಹಾಫ್ ಹೆಲ್ಮೆಟ್ ಧರಿಸಿಕೊಂಡು ಬರುತ್ತಿದ್ದವರನ್ನು ಕರೆಯಿಸಿ ಈ ರೀತಿಯ ಅರ್ಧ ಹೆಲ್ಮೆಟ್ ಹಾಕಿಕೊಂಡು ವಾಹನ ಸವಾರಿ ಮಾಡಬಾರದು. ಅಪಘಾತವಾದಾಗ ಅರ್ಧ ಹೆಲ್ಮೆಟ್ ನಿಮ್ಮ ತಲೆಯನ್ನು ರಕ್ಷಿಸುವುದಿಲ್ಲ. ಇದರಿಂದ ಇನ್ನು ಮುಂದೆ ಅರ್ಧ ಹೆಲ್ಮೆಟ್ ಧರಿಸಬೇಡಿ ಎಂದು ತಿಳಿಹೇಳಿದರು. ವಾಹನ ಸವಾರರು ಧರಿಸಿದ್ದ ಹೆಲ್ಮೆಟ್ ಅನ್ನು ವಶಕ್ಕೆ ಪಡೆದು, ಸವಾರರನ್ನು ಕಳುಹಿಸಿಕೊಟ್ಟರು.
ತಮ್ಮ ಹಿರಿಯ ಅಧಿಕಾರಿಗಳೇ ರಸ್ತೆಗಿಳಿದು ಅರಿವು ಮೂಡಿಸುತ್ತಿದ್ದಂತೆಯೇ ನಗರದ ಪೂರ್ವ ಮತ್ತು ಪಶ್ಚಿಮ ಸಂಚಾರಿ ಪೊಲೀಸರು ಹಾಫ್ ಹೆಲ್ಮೆಟ್ ಧರಿಸಿಕೊಂಡು ದ್ವಿಚಕ್ರ ವಾಹನ ಸವಾರರನ್ನು ತಡೆದು ಎಸ್ಪಿ ಮಿಥುನ್ ಕುಮಾರ್ ಅವರ ಬಳಿ ಕಳುಹಿಸುತ್ತಿದ್ದರು. ಈ ವೇಳೆ ವಾಹನ ಸವಾರರು ಸೀದಾ ಬಂದು ಅವರೇ ತಮ್ಮ ಕೈಯ್ಯಾರೆ ಅರ್ಧ ಹೆಲ್ಮೆಟ್ ತೆಗೆದು ಹೆಲ್ಮೆಟ್ ರಾಶಿಯಲ್ಲಿ ಹಾಕಿ ಹೋದರು.
ಕೆಲವರು ಪೊಲೀಸರ ಕೈಯಲ್ಲೆ ಕೊಟ್ಟು ಹೋದರು. ಕೆಲವರು ತಾವು ಸರಿಯಾದ ಹೆಲ್ಮೆಟ್ ಹಾಕಿಕೊಂಡು ಬರುತ್ತಿರುವುದಾಗಿ ಹೇಳಿದಾಗ ಸಂಚಾರಿ ಪೊಲೀಸರು ವಾಹನ ಸವಾರರಿಗೆ ಹಾಫ್ ಹೆಲ್ಮೆಟ್ ಹಾಗೂ ಫುಲ್ ಹೆಲ್ಮೆಟ್ ನಡುವೆ ಇರುವ ವ್ಯತ್ಯಾಸದ ಬಗ್ಗೆ ತಿಳಿಸಿ ಹೇಳುತ್ತಿದ್ದರು. ಈ ನಡುವೆ ಹೆಲ್ಮೆಟ್ ಬಗ್ಗೆ ಅರಿವು ಮೂಡಿಸುತ್ತಿರುವ ಪೊಲೀಸರಿಗೆ ಸಾರ್ವಜನಿಕರು ಹೂ ಬೊಕ್ಕೆ ಹಾಗೂ ಸಿಹಿ ನೀಡಿ ಶುಭ ಕೋರಿದರು.
ಡಿವೈಎಸ್ಪಿ ಹೇಳಿದ್ದೇನು? : ಹೆಲ್ಮೆಟ್ ಅಭಿಯಾನದ ನಂತರ ಮಾತನಾಡಿದ ಶಿವಮೊಗ್ಗ ಡಿವೈಎಸ್ಪಿ ಸುರೇಶ್, ಶಿವಮೊಗ್ಗ ಜಿಲ್ಲಾ ಸಂಚಾರಿ ಪೊಲೀಸರಿಂದ ದ್ವಿಚಕ್ರ ವಾಹನ ಸವಾರರಿಗೆ ಹಾಫ್ ಹೆಲ್ಮೆಟ್ ಧರಿಸಿ ಸವಾರಿ ಮಾಡುವುದರಿಂದ ಉಂಟಾಗುವ ಅಪಾಯದ ಕುರಿತು ಅರಿವು ಮೂಡಿಸಲಾಗುತ್ತಿದೆ. ಅವರಿಗೆ ಪುಲ್ ಹೆಲ್ಮೆಟ್ ಧರಿಸುವುದರಿಂದ ಅವರ ತಲೆ ಹೇಗೆ ಸುರಕ್ಷಿತವಾಗಿರುತ್ತದೆ ಎಂಬುದರ ಬಗ್ಗೆ ತಿಳಿಸಿ ಹೇಳಲಾಯಿತು. ಈ ಅಭಿಮಾನ ಹಲವು ದಿನಗಳಿಂದ ಶಿವಮೊಗ್ಗ ಹಾಗೂ ಭದ್ರಾವತಿ ನಗರದಲ್ಲಿ ಮಾಡಲಾಗುತ್ತಿದೆ. ಫುಲ್ ಹೆಲ್ಮೆಟ್ ಧರಿಸುವುವವರು ಐಎಸ್ಐ ಮಾರ್ಕ್ನ ಹೆಲ್ಮೆಟ್ ಧರಿಸಬೇಕೆಂದು ಸೂಚಿಸಲಾಗಿದೆ ಎಂದರು. ನಗರ ಸಂಚಾರಿ ಪೊಲೀಸ್ ಠಾಣೆಯ ಪಿಐ ಸಂತೋಷ್ ಸೇರಿದಂತೆ ಇತರೆ ಸಿಬ್ಬಂದಿ ಉಪಸ್ಥಿತರಿದರು.
ಇದನ್ನೂ ಓದಿ : Wear Helmet: ಹೆಲ್ಮೆಟ್ ಧರಿಸದೆ ಸಾವನ್ನಪ್ಪುವವರ ಸಂಖ್ಯೆ ಹೆಚ್ಚು: ಜಂಟಿ ಪೊಲೀಸ್ ಆಯುಕ್ತ ಅನುಚೇತ್