ಶಿವಮೊಗ್ಗ: ಪ್ರಧಾನಿ ಮೋದಿಯವರು ಕಾರ್ಪೋರೇಟ್ ಪರವಾಗಿ ಇದ್ದಾರೆಯೇ ಹೊರತು ರೈತರ ಪರವಾಗಿಲ್ಲ. ಕಳೆದ ಐದು ವರ್ಷದಲ್ಲಿ ರೈತರಿಗೆ ಏನೂ ಮಾಡಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು ಆರೋಪಿಸಿದರು.
ತಾಲೂಕಿನ ತೀರ್ಥಹಳ್ಳಿಯಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಮೋದಿ ಯಾವುದೇ ಸಾಧನೆ ಮಾಡದೇ ಸುಳ್ಳು ಹೇಳಿಕೊಂಡು ಐದು ವರ್ಷ ಪೂರ್ಣಗೊಳಿಸಿದ್ದಾರೆ. ಅವರಷ್ಟು ಅಕ್ರಮ ಕೆಲಸ ಮಾಡಿದವರು ಯಾರೂ ಇಲ್ಲ. ರಾಹುಲ್ ಗಾಂಧಿ ಅವರನ್ನು ದೇಶದ ಪ್ರಧಾನಿ ಮಾಡಲು ನಾವು ಹೋರಾಟ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಲೋಕೊಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಕಳೆದ ಐದು ವರ್ಷದಲ್ಲಿ ಕರ್ನಾಟಕಕ್ಕೆ ಮೋದಿಯ ಕೊಡುಗೆ ಏನು ಎಂದು ಪ್ರಶ್ನೆ ಮಾಡಿದರು. ಕೇಂದ್ರ ಸರ್ಕಾರ ರಾಜ್ಯಕ್ಕೆ ಸರಿಯಾಗಿ ಅನುದಾನ ಬಿಡುಗಡೆ ಮಾಡುತ್ತಿಲ್ಲ. ರಾಜ್ಯ ಸರ್ಕಾರ ತನ್ನ ತೆರಿಗೆಯಿಂದ ಆಡಳಿತ ನಡೆಸುತ್ತಿದೆ. ದೇವೇಗೌಡರು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಅಂದ್ರೆ, ಯಡಿಯೂರಪ್ಪನವರು ತಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸಿದ್ದು,ಕುಟುಂಬ ರಾಜಕಾರಣವಲ್ಲವೇ ಎಂದು ಕೇಳಿದರು.
ಬಳಿಕ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ತಮ್ಮ ಕೈಯಲ್ಲಿ ಇದ್ದ ನಿಂಬೆಹಣ್ಣು ತೋರಿಸಿ ಇದು ರೇವಣ್ಣನ ನಿಂಬೆಹಣ್ಣು ಅಲ್ಲ ಎಂದು ತಮಾಷೆ ಮಾಡಿದರು. ಯಡಿಯೂರಪ್ಪ ಹಾಗೂ ಅವರ ಮಗ ತಮ್ಮ ಅವಧಿಯಲ್ಲಿ ಆದ ಅಬಿವೃದ್ದಿ ಕೆಲಸ ತೋರಿಸಿ ಮತ ಕೇಳದೆ, ಮೋದಿಗೆ ಮತ ನೀಡಿ ಎಂದು ಕೇಳುತ್ತಿದ್ದಾರೆ ಇವರಿಗೆ ನಾಚಿಕೆ ಆಗಬೇಕು ಎಂದರು.