ಭದ್ರಾವತಿ (ಶಿವಮೊಗ್ಗ): ಮಾಜಿ ಶಾಸಕ ಅಪ್ಪಾಜಿ ಗೌಡ ಅವರ ಸಾವಿನ ಬಗ್ಗೆ ಅವರ ಕುಟುಂಬದವರೇ ಅನುಮಾನ ವ್ಯಕ್ತಪಡಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಒಬ್ಬ ಜನ ಪ್ರತಿನಿಧಿಗೆ ವೆಂಟಿಲೇಟರ್ ಸಿಕ್ಕಿಲ್ಲ ಎಂದರೆ ಏನರ್ಥ ಎಂದು ಬಿಜೆಪಿ ಸರ್ಕಾರ ಹಾಗೂ ಖಾಸಗೀ ಆಸ್ಪತ್ರೆಗಳ ವಿರುದ್ದಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಮಾಜಿ ಶಾಸಕ ಎಂ.ಜೆ.ಅಪ್ಪಾಜಿಗೌಡ ನುಡಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಪ್ಪಾಜಿ ಗೌಡ ಅವರ ಕುಟುಂಬಕ್ಕೆ ಮುಂದಿನ ದಿನಗಳಲ್ಲಿ ಸಂಪೂರ್ಣ ಸಹಕಾರ ನೀಡುತ್ತೇವೆ ಎಂಬ ಭರವಸೆ ನೀಡಿದರು. ಭದ್ರಾವತಿ ಜನರು ಯಾವುದೇ ಕಾರಣಕ್ಕೂ ಅತಂಕಕ್ಕೆ ಒಳಗಾಗಬಾರದು. ಅವರ ಕುಟುಂಬಕ್ಕೆ ತಮ್ಮ, ಇಲ್ಲವೇ ಅಣ್ಣನಾಗಿಯೋ ಸಹಕಾರ ನೀಡುತ್ತೇನೆ ಎಂದರು.
ಅಪ್ಪಾಜಿ ಗೌಡ ಅವರಿಗೆ ಕೊರೊನಾ ಬಂದಿತ್ತು ಎಂದು ಹೇಳುತ್ತಿದ್ದಾರೆ. ಆದರೆ, ಅವರ ಕುಟುಂಬದ ಯಾರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿಲ್ಲ. ಇದೆಲ್ಲವನ್ನೂ ನೋಡಿದರೆ ಅಪ್ಪಾಜಿ ಗೌಡ ಅವರ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡುತ್ತವೆ. ಬೆಳಿಗ್ಗೆ ವಿಷಯ ಗೊತ್ತಾಗಿದ್ದರೇ ಅಪ್ಪಾಜಿ ಗೌಡ ಅವರಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಬಹುದಿತ್ತು. ಸಂಜೆ ವೇಳೆಗೆ ವಿಷಯ ತಿಳಿದಿದ್ದರಿಂದ ಚಿಕಿತ್ಸೆಗೆ ಕರೆತರಲು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಪ್ಪಾಜಿ ಗೌಡರ ಉತ್ತರಾಧಿಕಾರಿಯನ್ನಾಗಿ ಮಗ ಅಜಿತ್ ಗೌಡರನ್ನು ಆಯ್ಕೆ ಮಾಡಬೇಕುನ ಎಂದು ಜನರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ಭದ್ರಾವತಿಗೆ ಉತ್ತರಾಧಿಕಾರಿ ಯಾರು ಎಂದು ಹೇಳುವ ಸಮಯ ಇದಲ್ಲ. ಈಗಾಗಲೇ ನಾನು ಸೂಕ್ಷ್ಮವಾಗಿ ಎಲ್ಲವನ್ನು ಹೇಳಿದ್ದೇನೆ. ಕುಟುಂಬದ ಜೊತೆಗೆ ಮಾತನಾಡಿದ್ದೇನೆ. ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.
ಮುಂದಿನ ಜೆಡಿಎಸ್ ನಾಯಕ ಯಾರು ಎಂಬುದನ್ನು ಕಾರ್ಯಕರ್ತರ ತೀರ್ಮಾನಕ್ಕೆ ಬಿಟ್ಟಿದ್ದೇನೆ ಎಂದರು.
ನುಡಿನಮನ ಕಾರ್ಯಕ್ರಮದಲ್ಲಿ ಸರ್ವಧರ್ಮದ ಗುರುಗಳು ಸಹ ಭಾಗಿಯಾಗಿದ್ದರು. ಮಾತ್ರವಲ್ಲದೇ ಮಾಜಿ ಶಾಸಕ ವೈ.ಎಸ್.ವಿ ದತ್ತ, ಮಾಜಿ ಶಾಸಕಿ ಶಾರದ ಪೂರ್ಯನಾಯ್ಕ್, ಜೆಡಿಎಸ್ ಮುಖಂಡ ಶ್ರೀಕಾಂತ, ವಿವಿಧ ಮಠದ ಸ್ವಾಮೀಜಿಗಳು ಸೇರಿದಂತೆ ಹಲವರು ಅಭಿಮಾನಿಗಳು ಭಾಗಿಯಾಗಿದ್ದರು.