ಶಿವಮೊಗ್ಗ: ಬಿ ಎಸ್ ಯಡಿಯೂರಪ್ಪ ಅವರ ರಾಜಕೀಯ ನಿವೃತ್ತಿ ಕುರಿತು ಯಾರೋ ಒಬ್ಬರು ಹೇಳಿದ ತಕ್ಷಣ ತೀರ್ಮಾನ ಮಾಡಲು ಆಗಲ್ಲವೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಅವಧಿ ಮುಗಿದ ನಂತರ ಸಿಎಂ ಯಡಿಯೂರಪ್ಪ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಾರೆ ಎಂಬ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆಗೆ ಪ್ರತಿಕ್ರಿಯಿಸಿದರು. ನಿವೃತ್ತಿಯ ಬಗ್ಗೆ ನಿರ್ಧಾರವನ್ನು ಯಡಿಯೂರಪ್ಪ ತೆಗೆದುಕೊಳ್ಳುತ್ತಾರೆ. ಇಲ್ಲವೇ ಪಕ್ಷ ತೆಗೆದುಕೊಳ್ಳುತ್ತದೆ ಎಂದರು.
ಇನ್ನು, ರಾಜ್ಯದಲ್ಲಿ ಕಳೆದ ವರ್ಷ ಜಲಪ್ರಳಯ ಉಂಟಾಗಿದ್ದ ಎಲ್ಲಾ ತಾಲೂಕುಗಳಿಗೆ 25 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದ್ದು, ಸರ್ಕಾರಿ ಶಾಲೆಗಳಿಗೆ ಸಹ ವಿಶೇಷ ಅನುದಾನ ನೀಡಲಾಗ್ತಿದೆ. ರಾಜ್ಯದ 6021 ಗ್ರಾ.ಪಂ.ಗಳಿಗೆ ಸೋಲಾರ್ ಅಳವಡಿಕೆ ಮಾಡಲಾಗಿದೆ. ಜತೆಗೆ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲೇ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಈಗಾಗಲೇ 20 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.