ಶಿವಮೊಗ್ಗ: ಬಿಜೆಪಿ ನಮ್ಮ ತಾಯಿ ಇದ್ದಂತೆ. ಹಿಂದೂ ಧರ್ಮದ ತಳಹದಿಯ ಮೇಲೆ ಭಾರತಾಂಬೆಯನ್ನು ಶ್ರೇಷ್ಠ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಕಲ್ಪನೆ ಇರುವ ಏಕೈಕ ಪಕ್ಷ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ದೊಡ್ಡವರ ಬಗ್ಗೆ ಮಾತನಾಡಲು ಇಷ್ಟಪಡಲ್ಲ. ಯಾರ ಬಗ್ಗೆಯೂ ಟೀಕೆ ಮಾಡುವುದಿಲ್ಲ ಎಂದರು.
ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ರಾಷ್ಟ್ರಮಟ್ಟದ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ನಡ್ಡಾ ಅವರು ಹೇಳ್ತಾರೆ ನಾವು ಕೂಡಾ ಸಾಮಾನ್ಯ ಕಾರ್ಯಕರ್ತರು ಎಂದು. ಹೀಗಾಗಿ ಭಾರತಾಂಬೆ, ಬಿಜೆಪಿ ನಮ್ಮ ತಾಯಿ ಎಂಬ ಭಾವನೆಯಲ್ಲಿಯೇ ಪಕ್ಷ ಸಂಘಟನೆ ಮಾಡಿಕೊಂಡು ಬಂದಿದ್ದೇವೆ. ಇದರ ವಿಚಾರ, ಸಿದ್ಧಾಂತವೇ ದೇಶ ಮತ್ತು ಧರ್ಮವನ್ನು ಅಭಿವೃದ್ದಿಪಡಿಸುವುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಿಂದ ಹಿಡಿದು ಪ್ರಧಾನಿವರೆಗೂ ಅವಕಾಶ ಸಿಕ್ಕವರು ಚುನಾಯಿತ ಪ್ರತಿನಿಧಿಯಾಗ್ತಾರೆ. ಆದರೆ ಚುನಾಯಿತ ಪ್ರತಿನಿಧಿಯೇ ವಿಶೇಷ ಅಲ್ಲ. ಸಾಮಾನ್ಯ ಕಾರ್ಯಕರ್ತನೂ ಕೂಡ ಯಾವುದೇ ಸ್ಥಾನಕ್ಕೆ ಹೋಗಬಹುದು ಎಂದು ಬಿಜೆಪಿ ತೋರಿಸಿಕೊಟ್ಟಿದೆ. ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಸೇರಿದಂತೆ ಬಿಜೆಪಿ ಬಿಡುವವರ ಬಗ್ಗೆ ನಾನು ಟೀಕೆ ಮಾಡಲ್ಲ. ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಹೋಗುವವರ ಮನವೊಲಿಸಿ ತಡೆಯಬೇಕು. ತಾಯಿಯನ್ನು ಒದ್ದು ಹೋಗೋದು ಸರಿಯಲ್ಲ ಎಂದು ಹೇಳಿದರು.
ನನಗೆ ಅನುಕೂಲ ಆದಾಗ ಸಿದ್ದಾಂತ, ವಿಚಾರವನ್ನು ಹೊಗಳೋದು, ತೊಂದರೆಯಾದಾಗ ಬಿಡುವ ಪದ್ಧತಿ ಒಳ್ಳೆಯದಲ್ಲ. ಯಾವುದೇ ಒಬ್ಬ ವ್ಯಕ್ತಿಯ ಮೇಲೆ ಪಕ್ಷ ನಿಂತಿಲ್ಲ. ವಿಚಾರ- ಸಿದ್ದಾಂತದ ಮೇಲೆ ಬಿಜೆಪಿ ನಿಂತಿದೆ. ಕಾಂಗ್ರೆಸ್ಗೆ ಯಾವುದೇ ವಿಚಾರ- ಸಿದ್ದಾಂತಗಳಿಲ್ಲ ಎಂದು ಟೀಕಿಸಿದರು.
ಸಿದ್ದರಾಮಯ್ಯ ಟೀಕೆ ವಿಚಾರವಾಗಿ ಮಾತನಾಡಿ, ನಾನು ಯಾವುದೇ ಸ್ಥಾನಮಾನವನ್ನು ನಿರೀಕ್ಷೆ ಮಾಡಿರಲಿಲ್ಲ. ಬಂದಾಗ ಸೊಕ್ಕು ಮಾಡಿಲ್ಲ. ಕೊಟ್ಟ ಜವಾಬ್ದಾರಿ ನಿರ್ವಹಿಸಿದ್ದೇನೆ. ಆರ್ಎಸ್ಎಸ್ ಬಗ್ಗೆ ಪಾಪ ಅಂತೀರಲ್ಲ, ನಿಮ್ಮ ಸ್ಥಿತಿ ಏನು? ಕೋಲಾರ, ವರುಣದಲ್ಲಿ ಸ್ಪರ್ಧೆ ಮಾಡ್ತೀನಿ ಅಂದ್ರಿ. ಕೋಲಾರದಲ್ಲಿ ಸಿದ್ದರಾಮಯ್ಯರನ್ನು ಕಾಂಗ್ರೆಸ್‌ನವರೇ ಸೋಲಿಸಿ ಆಯ್ತು. ವರುಣದಲ್ಲಿ ಬಿಜೆಪಿಯವರು ಸೋಲಿಸ್ತಾರೆ ಎಂದು ವ್ಯಂಗ್ಯವಾಡಿದರು.
ತಮಗೆ ಜೀವ ಬೆದರಿಕೆ ಇರುವ ವಿಚಾರದ ಬಗ್ಗೆ ಮಾತನಾಡಿ, ಪಿಎಫ್ಐನ ಶಾಹೀರ್ ಶೇಖ್ ಎಂಬಾತ ನಿತಿನ್ ಗಡ್ಕರಿ ಅವರಿಗೆ ಫೋನ್ ಮೂಲಕ ಬೆದರಿಕೆ ಹಾಕಿದ್ದ. ಆತನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಆತ ಹಿಂದೂ ಧರ್ಮದ ಪ್ರಮುಖರನ್ನು ಕೊಲೆ ಮಾಡಲು ಪಟ್ಟಿ ಮಾಡಿಕೊಂಡಿದ್ದ. ಅದರಲ್ಲಿ ನನ್ನ ಹೆಸರೂ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಈ ಬಗ್ಗೆ ಗಮನಹರಿಸಿದ್ದು, ಕ್ರಮಕ್ಕೆ ಸೂಚಿಸಿದ್ದಾರೆ. ಎನ್ಐಎ ತನಿಖೆಗೆ ಕೂಡ ಕೇಸ್ ರೆಫರ್ ಆಗಿದೆ. ಮನೆ ಹಾಗೂ ನನಗೆ ಭದ್ರತೆ ಕೊಡೋದಾಗಿ ಸಿಎಂ ತಿಳಿಸಿದ್ದಾರೆ ಎಂದು ಹೇಳಿದರು.
ಬಿಜೆಪಿ ಮೂರನೇ ಪಟ್ಟಿ ಬಿಡುಗಡೆ ಬಗ್ಗೆ ಪ್ರತಿಕ್ರಿಯಿಸಿ, ಇಂದು ಅಥವಾ ನಾಳೆಯೊಳಗೆ ಉಳಿದ ಕ್ಷೇತ್ರಗಳ ಟಿಕೆಟ್ ಘೋಷಣೆಯಾಗಬಹುದು. ನನಗೂ ಗೊತ್ತಿಲ್ಲ, ಯಾವಾಗ ಪಟ್ಟಿ ಬಿಡುಗಡೆ ಮಾಡುತ್ತಾರೆ ಎಂದು. ರಾಷ್ಟ್ರೀಯ ನಾಯಕರು ಟಿಕೆಟ್ ಕೊಡುವ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದರು.
ಇದನ್ನೂ ಓದಿ: ಮೊಮ್ಮಕ್ಕಳನ್ನು ಆಡಿಸುವುದು ಬಿಟ್ಟು ಕಾಂಗ್ರೆಸ್ ಸೇರ್ಪಡೆ ಯಾಕೆ?: ಶೆಟ್ಟರ್ ಬಗ್ಗೆ ಮುನಿರತ್ನ ವ್ಯಂಗ್ಯ