ಶಿವಮೊಗ್ಗ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಬುರೆವಿ ಚಂಡಮಾರುತದಿಂದಾಗಿ ಸೋಮವಾರ ಸಂಜೆ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಸುರಿಯಿತು.
ಸಂಜೆಯ ವೇಳೆ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಹೊಸನಗರ ಹಾಗೂ ತೀರ್ಥಹಳ್ಳಿ ಭಾಗದಲ್ಲಿ ಸಹ ಮಳೆ ಬಿದ್ದಿದೆ. ಮಳೆಯಿಂದಾಗಿ ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದರೆ, ಭತ್ತ ಬೆಳೆದ ರೈತರಲ್ಲಿ ಆತಂಕದ ಛಾಯೆ ಕಾಣಿಸಿಕೊಂಡಿದೆ.
ಭತ್ತದ ಕಟಾವು ನಡೆಯುತ್ತಿದ್ದು, ಮಳೆ ಹೆಚ್ಚಾದರೆ ಕಟಾವು ಮಾಡಲು ತೊಂದರೆ ಆಗಲಿದೆ. ಇದರಿಂದ ಭತ್ತದ ತೆನೆ ಉದುರಿ ಮಣ್ಣು ಪಾಲಾಗುತ್ತದೆ ಎಂಬ ಭಯ ಬೆಳೆಗಾರರಲ್ಲಿ ಮೂಡಿದೆ. ಮಳೆ ಬಂದು ಕೆಸರು ಹೆಚ್ಚಾದರೂ ಕಟಾವು ಯಂತ್ರಗಳು ಸಹ ಗದ್ದೆಯೊಳಗೆ ಹೋಗುವುದಿಲ್ಲ. ಇದರಿಂದ ಭತ್ತದ ಬೆಳೆಗಾರರು ಆತಂಕದಲ್ಲಿ ಇರುವಂತಿದೆ. ಅಡಿಕೆ ಬೆಳೆಗಾರರಲ್ಲಿ ಮಂದಹಾಸ ಮೂಡಿದ್ದು, ಅಡಿಕೆ ನೀರು ಬಿಡುವುದನ್ನು ಮಳೆ ತಪ್ಪಿಸಿದೆ.