ಶಿವಮೊಗ್ಗ: ಕೋಳಿ ಕದಿಯಲು ಬಂದಿದ್ದೀಯಾ? ಎಂದು ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಹಲ್ಲೆಗೊಳಗಾದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೃಗವಧೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾಜು (45) ಮೃತ ವ್ಯಕ್ತಿ.
ರಾಜು ಗ್ರಾಮದ ಶಿಶಿರ ಎಂಬುವರ ಕೋಳಿ ಅಂಗಡಿಯ ಬಳಿ ಹೋದಾಗ ಶಿಶಿರ, ವಿಜೇಂದ್ರ ಹಾಗೂ ಶಿವು ಎಂಬುವರು ಕೋಳಿ ಕದಿಯಲು ಬಂದಿದ್ದೀಯಾ ಎಂದು ಕಟ್ಟಿ ಹಾಕಿ, ಬೆನ್ನು ಹಾಗೂ ಕಾಲಿಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಇದರಿಂದ ರಾಜು ತೀವ್ರ ಅಸ್ವಸ್ಥಗೊಂಡಿದ್ದ. ಆತನನ್ನು ನೋಡಿದ ಮನೆಯವರು ನೀರು ಕುಡಿಸುತ್ತ ಏನಾಯ್ತು? ಎಂದು ವಿಚಾರಿಸಿದಾಗ, ಶಿಶಿರ, ವಿಜೇಂದ್ರ ಹಾಗೂ ಶಿವು ಕಂಬಕ್ಕೆ ಕಟ್ಟಿ ಹೊಡೆದರು ಎಂದು ಹೇಳಿ ಪ್ರಾಣ ಬಿಟ್ಟಿದ್ದಾನೆ ಎನ್ನಲಾಗಿದೆ.
ಈ ಕುರಿತು ಮೃತ ರಾಜುವಿನ ಮಗ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹಲ್ಲೆ ನಡೆಸಿದ ಮೂವರು ಪರಾರಿಯಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಬಾಲಕನಿಗೆ ಚಾಕು ಇರಿತ; ಕುಂದಾನಗರಿಯಲ್ಲಿ ಬಿಗುವಿನ ವಾತಾವರಣ