ಶಿವಮೊಗ್ಗ : ಜಿಲ್ಲಾ ಸಹಕಾರಿ ಬ್ಯಾಂಕ್ ಈವರೆಗೆ ರೈತರಿಗೆ 500 ಕೋಟಿ ರೂ. ಸಾಲ ನೀಡಿದೆಯೆಂದು ಸಹಕಾರಿ ಬ್ಯಾಂಕಿನ ಜಿಲ್ಲಾಧ್ಯಕ್ಷ ಅರ್ ಎಂ ಮಂಜುನಾಥಗೌಡ ತಿಳಿಸಿದರು.
ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳ ಜತೆಗೆ ನಡೆದ ರಾಜ್ಯಮಟ್ಟದ ಒಂದು ದಿನದ ವಿಶೇಷ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ನಬಾರ್ಡ್ ನಿಂದ ಈವರೆಗೂ ಕೇವಲ 113 ಕೋಟಿ ರೂ. ಆರ್ಥಿಕ ನೆರವು ಬಂದಿದೆ. ಆದರೂ ಸಹ ಡಿಸಿಸಿ ಬ್ಯಾಂಕ್ 500 ಕೋಟಿ ರೂ. ಸಾಲ ನೀಡಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ 140 ರಿಂದ 150 ಕೋಟಿ ರೂ.ಗಳಷ್ಟು ಹಣ ಬರಬೇಕಾಗಿದೆ ಎಂದರು.
ಸಾಲಮನ್ನಾ ಹಣ ರೈತರ ಖಾತೆಗಳಿಗೆ ಜಮಾ ಆಗುವುದಿಲ್ಲ. ಅದು ಸಾಲದ ಖಾತೆಗಳಿಗೆ ಜಮಾ ಆಗುತ್ತದೆ ಎಂದ ಅವರು ಇದನ್ನ ತಿಳಿಸುವಲ್ಲಿ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಸಾಲದ ಮೇಲಿನ ಬಡ್ಡಿ ವಸೂಲಿ ಮಾಡಲಾಗುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಒಂದು ವೇಳೆ ವಸೂಲಾತಿ ಆದರೂ ಸಹ ಗ್ಯಾಸ್ ಸಬ್ಸಿಡಿ ದರದ ಹಣ ಹೇಗೆ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ ಎಂದು ಪ್ರಶ್ನಿಸಿದರು.
ಡಿಸಿಸಿ ಬ್ಯಾಂಕ್‌ನ ಮೇಲೆ ಬಹುತೇಕ ಸಹಕಾರಿ ಸಂಘಗಳು ಅವಲಂಬಿತವಾಗಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಎಚ್ಚರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ ಎ ದಯಾನಂದ ಉಪಸ್ಥಿತರಿದ್ದರು.