ಶಿವಮೊಗ್ಗ: ರಾಜ್ಯ ಸರ್ಕಾರ ಲಾಕ್ಡೌನ್ 3.O ಅನ್ವಯ ಹಸಿರು ಹಾಗೂ ಕಿತ್ತಳೆ ವಲಯಗಳಲ್ಲಿ ಕೆಲ ಸಡಿಲಿಕೆ ನೀಡಿದೆ. ಇದರಿಂದ ಹಸಿರು ವಲಯದಲ್ಲಿರುವ ಶಿವಮೊಗ್ಗದ ಕ್ಷೌರಿಕರು ಅಂಗಡಿ ತೆರೆದಿದ್ದಾರೆ. ಆದರೆ, ಬರುವ ಗ್ರಾಹಕರ ದಾಖಲೆ ಪಡೆದು ಕಟಿಂಗ್ ಮಾಡಬೇಕು ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿರುವುದು ಮಾಲೀಕರ ತಲೆ ಬಿಸಿಗೆ ಕಾರಣವಾಗಿದೆ.
ಜಿಲ್ಲೆ ಸಾಗರ ಪಟ್ಟಣದ ಕ್ಷೌರಿಕರ ಅಂಗಡಿಗೆ ಬರುವವರ ವಿಳಾಸ ಹಾಗೂ ಆಧಾರ್ ಕಾರ್ಡ್ ಪಡೆಯುವಂತೆ ಸೂಚನೆ ನೀಡಿದ್ದಾರೆ. ಕಟಿಂಗ್ ಮಾಡುವಾಗ ನೇರವಾಗಿ ಎಲ್ಲರ ಸಂಪರ್ಕಕ್ಕೆ ಬರುವುದರಿಂದ ಕೊರೊನಾ ಹರಡುವ ಭಯವಿದೆ. ಇದರಿಂದ ಕಡ್ಡಾಯವಾಗಿ ಮಾಸ್ಕ್ ಹಾಗೂ ಕೈ ಗವಸು ಧರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ತಮ್ಮ ಕೆಲಸದ ನಡುವೆ ದಾಖಲೆ ಸಂಗ್ರಹಿಸುವುದು ಕಷ್ಟಕರವಾಗಿದೆ. ದಯವಿಟ್ಟು ದಾಖಲಾತಿ ಪ್ರಕ್ರಿಯೆಯನ್ನು ಕೈಬಿಡುವಂತೆ ಸಾಗರ ಪಟ್ಟಣದ ಕ್ಷೌರಿಕರು ಸಿಎಂ ಬಿಎಸ್ವೈಗೆ ಮನವಿ ಮಾಡಿದ್ದಾರೆ.