ಶಿವಮೊಗ್ಗ: ಕೊರೊನಾ ಮಹಾಮಾರಿಯ ಅಪಾಯದ ಕುರಿತು ಸರ್ಕಾರ ಸೇರಿದಂತೆ ಅನೇಕ ಸಂಘ- ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸಲು ಸಾಕಷ್ಟು ಪ್ರಯತ್ನ ಮಾಡಿವೆ. ಇದೀಗ ಜಿಲ್ಲೆಯ ವಾರಿಯರ್ಸ್ ಆದ ಪೊಲೀಸರು ಕೊರೊನಾದ ಬಗ್ಗೆ ಜಾಗೃತಿ ಮೂಡಿಸಲು ಗೀತೆ ರಚಿಸಿ ಹಾಡಿದ್ದಾರೆ.
ನಗರದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಕೋರ್ಟ್ ವಾರೆಂಟ್ ನೀಡುವ ಪ್ರಶಾಂತ್ ಹಾಗೂ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ದಾನಂರವರು ಸೇರಿ ರಚಿಸಿ ಹಾಡಿರುವ, 'ಗಾಳಿಗೆ ತೋರಬೇಡಿ ಆದೇಶ, ಹೋರಾಟ ಮಾಡಿದೆ ಈ ದೇಶ' ಎಂಬ ಕೊರೊನಾ ಜಾಗೃತ ಗೀತೆಯನ್ನು ಹಾಡಿದ್ದಾರೆ.
ಸುಮಾರು 5 ನಿಮಿಷ 40 ಸೆಕೆಂಡ್ ನ ವಿಡಿಯೋದಲ್ಲಿ ಸಂಪೂರ್ಣವಾಗಿ ಕೊರೊನಾದ ಅಪಾಯ, ವೈರಸ್ನಿಂದ ದೂರವಿರುವ ಬಗ್ಗೆ ಹಾಗೂ ವಾರಿಯರ್ಸ್ಗಳ ಕುರಿತು ಗೀತೆ ರಚನೆ ಮಾಡಲಾಗಿದೆ.
ತುಂಗಾ ನಗರ ಪೊಲೀಸ್ ಠಾಣೆಯ ಪ್ರಶಾಂತ್ ಗೀತೆ ರಚನೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಹೀಗಿರುವಾಗ ದಾನಂ ಕೊರೊನಾದ ಬಗ್ಗೆ ಹಾಡು ಬರೆದು ಕೊಡುವಂತೆ ತಿಳಿಸಿದ ಒಂದೇ ದಿನದಲ್ಲಿ ಪ್ರಶಾಂತ್ ಹಾಡು ಬರೆದು ಕೊಟ್ಟಿದ್ದಾರೆ. ದಾನಂ ಇದಕ್ಕೆ ಸಂಗೀತ ನೀಡಬೇಕೆಂದು ಶಿವಮೊಗ್ಗದ ಅನಂತನಾಥ ಸ್ಟೋಡಿಯೋದ ಆದಿತ್ಯ ಅವರ ಬಳಿ ಕುಳಿತು ಸುಮಾರು 10 ದಿನಗಳ ನಿರಂತರ ಪರಿಶ್ರಮದಿಂದ ಕೊರೊನಾ ಜಾಗೃತಿ ಹಾಡು ಅಲ್ಬಂ ಅನ್ನು ಹೊರತಂದಿದ್ದಾರೆ.
ಇದನ್ನು ಹೊರತರಲು ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿ.ಪಂ ಸಿ ಇ ಒ ವೈಶಾಲಿ, ಪೊಲೀಸ್ ಇಲಾಖೆ ಎಸ್ಪಿ ಕೆ.ಎಂ.ಶಾಂತರಾಜು, ಎಎಸ್ಪಿ ಡಾ.ಶೇಖರ್ ಸೇರಿದಂತೆ ಇಲಾಖೆಯ ಸಿಬ್ಬಂದಿ ಸಹಕಾರ ನೀಡಿದ್ದಾರೆ. ಇದರಿಂದ ಕೇವಲ ಹಾಡು ಅಷ್ಟೆ ಅಲ್ಲದೆ, ಮಾಸ್ಕ್ ಧರಿಸುವ ಹಾಗೂ ಪೊಲೀಸರ ಕಾರ್ಯವನ್ನು ತೋರಿಸಲಾಗಿದೆ. ಸದ್ಯ ಇದನ್ನು ಯೂ ಟ್ಯೂಬ್ ಗೆ ಅಪ್ಲೋಡ್ ಮಾಡಲಾಗಿದೆ.