ಶಿವಮೊಗ್ಗ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆಗೈದ ನಾಥುರಾಮ್ ಗೋಡ್ಸೆ ಓರ್ವ ಅಪ್ಪಟ ದೇಶಭಕ್ತ ಎಂಬ ಹೇಳಿಕೆ ನೀಡಿರುವ ಸ್ವಾಧ್ವಿ ಪ್ರಗ್ಯಾರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸ್ವಾಧ್ವಿ ಪ್ರಗ್ಯಾರ ಭಾವಚಿತ್ರಕ್ಕೆ ಬೆಂಕಿ ಹಚ್ಚುವ ಮೂಲಕ ಪ್ರತಿಭಟನೆ ಮಾಡಲಾಯಿತು.
ನಗರದ ಮಹಾವೀರ ವೃತ್ತದಲ್ಲಿ ಪ್ರಗ್ಯಾ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಹೆಚ್.ಎಸ್ ಸುಂದ್ರೇಶ್ ನಾಥೂರಾಮ್ ಗೋಡ್ಸೆ ಅವರನ್ನು ದೇಶಭಕ್ತ ಎನ್ನುವ ಮೂಲಕ ದೇಶದಲ್ಲಿ ಅಶಾಂತಿ ಮೂಡಿಸುವ ಕೆಲಸವನ್ನ ಬಿಜೆಪಿಯ ಕೆಲ ನಾಯಕರುಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ದೇಶ ದ್ರೋಹದ ಮಾತನಾಡಿರುವ ಸ್ವಾಧ್ವಿ ಪ್ರಗ್ಯಾ ಸಿಂಗ್ ಅವರನ್ನ ಕೂಡಲೇ ಬಂಧಿಸಿ ದೇಶದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು . ನಾಥುರಾಮ್ ಗೋಡ್ಸೆ ದೇಶಭಕ್ತ ಎಂಬ ಹೇಳಿಕೆಗೆ ಸಂಸದರಾದ ಅನಂತ್ ಕುಮಾರ್ ಹೆಗಡೆ, ನಳಿನ್ ಕುಮಾರ್ ಕಟೀಲ್ ಇದಕ್ಕೆ ಧ್ವನಿಗೂಡಿಸಿ ಮಹಾತ್ಮ ಗಾಂಧೀಜಿ ಅವರಿಗೆ ಅಪಮಾನ ಮಾಡಿದ್ದಾರೆ ಇಂಥವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದರು. ಹಾಗೂ ದೇಶದ ಜನತೆಗೆ ಅಮಿತ್ ಷಾ ಮತ್ತು ಪ್ರಧಾನಿ ಮೋದಿಯವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.