ಶಿವಮೊಗ್ಗ: ದೇಶಕ್ಕೆ ವಿಪತ್ತು ಬಂದಾಗ 1976ರಲ್ಲಿ ಇಂದಿರಾ ಗಾಂಧಿ ಸೈನ್ಯಕ್ಕೆ ವಿಶೇಷ ಅಧಿಕಾರ ನೀಡುವ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಈ ಅಧಿಕಾರ ಸೈನ್ಯದಲ್ಲೆ ಉಳಿಯಬೇಕು ಎಂದು ಬಿಜೆಪಿ ಪ್ರತಿಪಾದಿಸಿದರೆ, ಅದನ್ನು ತೆಗೆಯುತ್ತೇವೆ ಎಂದು ಕಾಂಗ್ರೆಸ್ನ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಹೇಳುವ ಮೂಲಕ ಮೂರ್ಖತನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಬಿಜೆಪಿ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ.
ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ದೇಶದ ಎಲ್ಲಾ ಮುಸ್ಲಿಂರನ್ನು ಹಾಗೂ ಕ್ರಿಶ್ಚಿಯನ್ನರನ್ನು ದೇಶ ಭಕ್ತರು ಅಂತ ತಿಳಿದುಕೊಂಡಿದೆ. ಆದ್ರೆ ಕಾಂಗ್ರೆಸ್ ಹಾಗೆ ಭಾವಿಸಿಲ್ಲ. ಕಾರಣ ಸೈನ್ಯ ಪಾಕಿಸ್ತಾನಕ್ಕೆ ಏನಾದ್ರೂ ಮಾಡಿದ್ರೆ, ದೇಶದ ಮುಸ್ಲಿಂರು ಬೇಸರ ಮಾಡಿಕೊಳ್ಳುತ್ತಾರೆ ಅಂತ ಕಾಂಗ್ರೆಸ್ನವರು ತಿಳಿದುಕೊಂಡಿದ್ದಾರೆ ಎಂದು ವ್ಯಂಗ್ಯ ಮಾಡಿದರು.
1976 ರಲ್ಲಿ ಇಂದಿರಾ ಗಾಂಧಿ ತಂದ ಕಾಯ್ದೆಯ ವಿರುದ್ಧ ಕೆಲವರು ಸುಪ್ರೀಂ ಕೋರ್ಟ್ಗೆ ಹೋದರು. 1983ರಲ್ಲಿ ಸುಪ್ರೀಂ ಕೋರ್ಟ್ ಈ ಕಾಯ್ದೆ ಅವಶ್ಯವಿದೆ ಎಂದು ಹೇಳಿತು. ಈ ಕಾಯ್ದೆಯ ಪ್ರಕಾರ ಸೈನ್ಯ ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡ್ರೆ ಅವರ ವಿರುದ್ಧ ಪೊಲೀಸರಿಗೆ ದೂರು ನೀಡುವ ಕಾಯ್ದೆ ಇದಾಗಿತ್ತು. ಇಂತಹ ಕಾನೂನು ಇರಲಿ ಎಂದು ಬಿಜೆಪಿ ಹೇಳಿದ್ರೆ ಕಾಂಗ್ರೆಸ್ನವರು ತಮ್ಮ ಪ್ರಣಾಳಿಕೆಯಲ್ಲಿ ಇಂದಿರಾ ಗಾಂಧಿಗೆ ವಿರುದ್ದವಾಗಿದ್ದಾರೆ ಎಂದರು.
ಬಿಜೆಪಿಯು ನಿನ್ನೆ ಉತ್ತಮವಾದ ಪ್ರಣಾಳಿಕೆಯನ್ನು ಜಾರಿಗೆ ತಂದಿದೆ. ನಮ್ಮದು ಮತ ಗಳಿಕೆಯ, ಪೊಳ್ಳು ಆಶ್ವಾಸನೆಯ ಕಾಗದದ ಚೂರಲ್ಲ. ನಮ್ಮದು ಇತರೆ ಪಕ್ಷಗಳಿಕ್ಕಿಂತ ಡಿಫರೆಂಟ್ ಪ್ರಣಾಳಿಕೆ ಅಂತ ಗೊತ್ತಾಗಿದೆ ಎಂದರು. ನಮ್ಮ ಪ್ರಣಾಳಿಕೆಯಲ್ಲಿ ರಾಷ್ಟ್ರೀಯತೆ ಪ್ರತಿಪಾದಿಸುವ ಅಂಶವಿದೆ. ಅಂತ್ಯೋದಯ ದರ್ಶನ ಹಾಗೂ ಉತ್ತಮ ಸರ್ಕಾರ ನೀಡುವುದು ನಮ್ಮ ಧ್ಯೇಯವಾಗಿದೆ ಎಂದರು.