ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಖಾತೆ ಸಚಿವ ಕೆ ಎಸ್ ಈಶ್ವರಪ್ಪರನ್ನು ಸಿಎಂ ಬಿ ಎಸ್ ಯಡಿಯೂರಪ್ಪನವರು ಘೋಷಣೆ ಮಾಡಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲಾ ಪಂಚಾಯತ್‌ನಲ್ಲಿ ನಡೆದ ಜಿಲ್ಲಾ ಪ್ರವಾಹ ಪರಿಹಾರ ಸಭೆಯಲ್ಲಿ ಭಾಗಿಯಾಗಿ ಸಿಎಂ ಈ ಘೋಷಣೆ ಮಾಡಿದರು. ಇನ್ನು ಮುಂದೆ ಈಶ್ವರಪ್ಪ ಜಿಲ್ಲೆಯ ಎಲ್ಲಾ ಸಭೆಗಳನ್ನು ನಡೆಸಲಿದ್ದು, ಅವರಿಗೆ ಎಲ್ಲಾ ಅಧಿಕಾರಿಗಳು ಸಹಕಾರ ನೀಡಬೇಕು ಎಂದರು.
ಇದೇ ವೇಳೆ ನೆರೆ ಪರಿಹಾರದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ರೈತರ ಮನೆಗಳಿಗೆ ಕಡ್ಡಾಯವಾಗಿ ಪರಿಹಾರ ತಲುಪಿಸಬೇಕು. ಅವರಿಗೆ ಅನ್ಯಾಯವಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿರು. ಶಿವಮೊಗ್ಗ ನಗರದ ದಸರಾ ಆಚರಣೆಗೆ ಅನುಕೂಲವಾಗಲು ಹಳೇ ಜೈಲು ಆವರಣವನ್ನು ಸ್ವಚ್ಛ ಮಾಡಲು ಮಹಾನಗರ ಪಾಲಿಕೆಯ ಉಪ ಮೇಯರ್ ಚನ್ನಬಸಪ್ಪನವರು 2 ಕೋಟಿ ರೂ. ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡರು. ಸಭೆಯಲ್ಲಿ ಡಿಸಿ, ಎಸ್ಪಿ, ಜಿಪಂ ಸಿಇಒ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.