ಭದ್ರಾವತಿ ಆಟೋ ಚಾಲಕನ ಕೊಲೆ ಪ್ರಕರಣಕ್ಕೆ ತಿರುವು: ಸ್ನೇಹಿತರಿಂದಲೇ ದುಷ್ಕೃತ್ಯ - ಭದ್ರಾವತಿಯಲ್ಲಿ ಕೊಲೆ
ಭದ್ರಾವತಿಯಲ್ಲಿ ಕೊಲೆಯಾದ ಆಟೋ ಚಾಲಕ ರೂಪೇಶ್ ಶಿವಮೊಗ್ಗದಲ್ಲಿ ನೆಲೆಸಿದ್ದ. ಭದ್ರಾವತಿಗೆ ಸ್ನೇಹಿತರು ಆತನನ್ನು ಕರೆಯಿಸಿಕೊಂಡಿದ್ದು, ಕಂಠಪೂರ್ತಿ ಕುಡಿದು ಮಾತನಾಡುವಾಗ ಯಾವುದೋ ವಿಚಾರಕ್ಕೆ ವಾಗ್ವಾದವಾಗಿತ್ತು.
ಶಿವಮೊಗ್ಗ: ಸ್ನೇಹಿತರು ಅಂದರೆ ಪ್ರಾಣಕ್ಕೆ ಪ್ರಾಣ ಕೊಡೋರು ಅಂತಾರೆ, ಆದರೆ ಜಿಲ್ಲೆಯ ಭದ್ರಾವತಿಯಲ್ಲಿ ಸ್ನೇಹಿತರೆ ತಮ್ಮ ಗೆಳೆಯನನ್ನು ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಕ್ಟೋಬರ್ 24ರಂದು ಭದ್ರಾವತಿಯ ಎಪಿಎಂಸಿ ಆವರಣದ ಮ್ಯಾಮ್ ಕೋಸ್ ಕಟ್ಟಡ ಬಳಿ ರೂಪೇಶ್ ಎಂಬಾತನ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಭದ್ರಾವತಿಯ ಹಳೇ ನಗರ ಠಾಣೆ ಪೊಲೀಸರು ತನಿಖೆ ನಡೆಸಿದಾಗ ಸ್ನೇಹಿತರ ಕೃತ್ಯ ಬಯಲಾಗಿದೆ.
ಆಟೋ ಚಾಲಕನಾಗಿದ್ದ ರೂಪೇಶ್ನನ್ನು ಆತನ ಸ್ನೇಹಿತರೇ ಆದ ಭದ್ರಾವತಿ ಕಾಚಗೂಂಡನಹಳ್ಳಿಯ ಕುಶಾಲ್(35) ಹಾಗೂ ಭದ್ರಾವತಿ ಹುತ್ತಾ ಕಾಲೋನಿಯ ಸೋಮಶೇಖರ ಅಲಿಯಾಸ್ ಕಪ್ಪೆ(33) ಎಂಬುವರು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರೂಪೇಶ್ ಮೂಲತಃ ಭದ್ರಾವತಿ ತಾಲೂಕು ಹೊಳೆಹೂನ್ನೂರಿನ ನಿವಾಸಿ. ಈತ ಶಿವಮೊಗ್ಗದಲ್ಲಿ ನೆಲೆಸಿದ್ದು ಆಟೋ ಓಡಿಸುತ್ತಿದ್ದ. ಕೊಲೆಯಾದ ದಿನ ರೂಪೇಶ್ನನ್ನು ಸೋಮಶೇಖರ್ ಹಾಗೂ ಕುಶಾಲ್ ಪಾರ್ಟಿ ಮಾಡಲು ಭದ್ರಾವತಿಗೆ ಕರೆಯಿಸಿಕೊಂಡಿದ್ದರು. ಬಳಿಕ ಕಂಠಪೂರ್ತಿ ಕುಡಿದು ಮಾತನಾಡುವಾಗ ಯಾವುದೋ ವಿಚಾರಕ್ಕೆ ವಾಗ್ವಾದವಾಗಿದೆ.
ಈ ವೇಳೆ ಕುಶಾಲ್ ಅಲ್ಲೇ ಇದ್ದ ಬಿದಿರಿನ ಕೋಲಿನಿಂದ ಹಲ್ಲೆ ನಡೆಸಿದ್ದಾನೆ. ರೂಪೇಶ್ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದು, ಆಗ ಸೋಮಶೇಖರ್ ಕೂಡ ದೊಣ್ಣೆಯಿಂದ ಥಳಿಸಿದ್ದಾನೆ. ಇದರಿಂದ ರೂಪೇಶ್ ಪ್ರಾಣ ಹಾರಿ ಹೋಗಿದೆ. ಬಳಿಕ ಆರೋಪಿಗಳಿಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ. ತನಿಖೆ ವೇಳೆ ಆರೋಪಿಗಳು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಾಯಿ ಆತ್ಮಹತ್ಯೆ: ರೂಪೇಶ್ ಕೊಲೆ ವಿಚಾರ ತಿಳಿದು ಶಿವಮೊಗ್ಗದಲ್ಲಿ ನೆಲೆಸಿದ್ದ ಆತನ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರೂಪೇಶ್ಗೆ ಮದುವೆಯಾಗಿದ್ದು, ಪತ್ನಿ ತವರು ಮನೆಯಲ್ಲಿಯೇ ನೆಲೆಸಿದ್ದಾಳೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಬೈಕ್ ತಡೆದಿದ್ದಕ್ಕೆ ಪೊಲೀಸ್ ಕಾನ್ಸ್ಟೇಬಲ್ಗೆ ಥಳಿಸಿದ ಯುವಕರು.. ವಿಡಿಯೋ