ಶಿವಮೊಗ್ಗ: ಅನಾರೋಗ್ಯದಿಂದ ಬಳಲುತ್ತಿರುವ ನಿಮ್ಮ ಮಗು ಆರೋಗ್ಯವಂತವಾಗಬೇಕಾದರೆ, ಹಿಂದೂ ಧರ್ಮ ಬಿಟ್ಟು ಕ್ರಿಶ್ಚಿಯನ್ ಧರ್ಮ ಅನುಸರಿಸಬೇಕು ಎಂದು ಹೇಳಿ ಮತಾಂತರ ಮಾಡಲು ಮುಂದಾಗಿದ್ದ ವ್ಯಕ್ತಿಯೊಬ್ಬನನ್ನು ಶಿವಮೊಗ್ಗದ ವಿನೋಬನಗರ ಪೊಲೀಸರು ಬಂಧಿಸಿದ್ದಾರೆ.
ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮನಕಟ್ಟೆ ಬಡಾವಣೆಯ ನಿವಾಸಿಯೊಬ್ಬರ 3 ವರ್ಷದ ಮಗುವಿಗೆ ಅನಾರೋಗ್ಯ ಉಂಟಾಗಿದ್ದು, ಸಾಕಷ್ಟು ವೈದ್ಯರ ಬಳಿ ತೋರಿಸಿದರೂ ಮಗು ಗುಣಮುಖವಾಗಿರಲಿಲ್ಲ. ಇದನ್ನೆ ಬಂಡವಾಳವಾಗಿ ಬಳಸಿಕೊಂಡ ಶಿವಮೊಗ್ಗದ ಕಾಶಿಪುರ ಬಡಾವಣೆಯ ನಿವಾಸಿ ಮಧು (34) ಎಂಬ ವ್ಯಕ್ತಿಯು ನಿಮ್ಮ ಮಗು ಗುಣಮುಖವಾಗಬೇಕಾದರೆ, ನೀವು ನಿಮ್ಮ ಹಿಂದೂ ಧರ್ಮವನ್ನು ಬಿಟ್ಟು ಕ್ರಿಶ್ಚಿಯನ್ ಧರ್ಮಕ್ಕೆ ಬರಬೇಕು ಎಂದು ಒತ್ತಾಯ ಮಾಡಿದ್ದಾನೆ.
ಅಲ್ಲದೇ ಏಸುವನ್ನು ಪ್ರಾರ್ಥಿಸಬೇಕು ಹಾಗೂ ಹಿಂದೂ ದೇವತೆಯ ಫೋಟೋಗಳನ್ನು ತೆಗೆದು ಹಾಕಬೇಕು ಎಂದು ಹೇಳಿ, ಕ್ರಿಶ್ಚಿಯನ್ ಧರ್ಮ ಭೋದನೆಯ ಪುಸ್ತಕಗಳನ್ನು ನೀಡಿ ಧರ್ಮ ಪಾಲಿಸುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗ್ತಿದೆ.
ಇದನ್ನು ಓದಿ: ಹಿಂದುತ್ವವು ಭಾರತೀಯ ಸಂವಿಧಾನದ ಪ್ರತಿಬಿಂಬ: ಮೋಹನ್ ಭಾಗವತ್
ಈ ಕುರಿತು ಸ್ಥಳೀಯರು ನೀಡಿದ ದೂರಿನ ಮೇರೆಗೆ ವಿನೋಬನಗರ ಪೊಲೀಸರು ಮಧು ಎಂಬಾತನನ್ನು ಬಂಧಿಸಿದ್ದಾರೆ. ಈತ ಬೊಮ್ಮನಕಟ್ಟೆಯಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿ ಮತಾಂತರ ಯತ್ನ ಮಾಡ್ತಾ ಇದ್ದನು ಎಂಬ ಆರೋಪದ ಮೇಲೆ ಬಂಧಿಸಿದ್ದಾರೆ. ಈತನ ವಿರುದ್ದ ಕಲಂ 417, 295 (a) IPC ಯಂತೆ ಪ್ರಕರಣ ದಾಖಲಿಸಲಾಗಿದೆ. ಮತಾಂತರ ಕಾಯ್ದೆ ಜಾರಿಗೆ ಬಂದ ನಂತರ ಜಿಲ್ಲೆಯಲ್ಲಿ ದಾಖಲಾದ ಮೂರನೇ ಪ್ರಕರಣ ಇದಾಗಿದೆ.