ಶಿವಮೊಗ್ಗ: ಕೋವಿಡ್ ಸೋಂಕು ದಿನೇ ದಿನೆ ಹೆಚ್ಚುತ್ತಿರುವುದರಿಂದಾಗಿ ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಆರು ತಿಂಗಳುಗಳ ಕಾಲ ಮುಂದೂಡುವಂತೆ ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆದಿದೆ. ಹೀಗಾಗಿ ಅವಧಿ ಮುಗಿದಿದ್ದರೂ ಚುನಾವಣೆ ನಡೆಯುವುದು ಇನ್ನು ಆರು ತಿಂಗಳ ಬಳಿಕವೇ. ಅಲ್ಲಿಯವರೆಗೆ ಜಿಲ್ಲಾ ಪಂಚಾಯತ್ನಲ್ಲಿ ಅಧಿಕಾರ ನಡೆಸುವುದು ಯಾರು ಎಂಬುದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ಮೇ. 5ಕ್ಕೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯರ ಅಧಿಕಾರಾವಧಿ ಮುಕ್ತಾಯಗೊಂಡಿದೆ. ಕೋವಿಡ್ ಇಲ್ಲದೇ ಇದ್ದರೆ ಇನ್ನೊಂದು ತಿಂಗಳ ಒಳಗಾಗಿ ಶಿವಮೊಗ್ಗ ಜಿಲ್ಲಾ ಪಂಚಾಯತ್ಗೆ ಚುನಾವಣೆ ನಡೆಯುತ್ತಿತ್ತು. ಆದರೆ, ಕೋವಿಡ್ನಿಂದಾಗಿ ಆರು ತಿಂಗಳು ಚುನಾವಣೆ ನಡೆಸಬಾರದು ಎಂದು ಸರ್ಕಾರವೇ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
ಹೀಗಾಗಿ ಇನ್ನು ಆರು ತಿಂಗಳು ಚುನಾವಣೆ ನಡೆಯುವುದು ಡೌಟ್. ಹೀಗಾಗಿ ಜಿಲ್ಲಾ ಪಂಚಾಯಿತಿಯನ್ನು ಈ ಆರು ತಿಂಗಳ ಕಾಲ ಮುನ್ನಡೆಸಲು ಸರ್ಕಾರ ಈಗಾಗಲೇ ಸೆಲ್ವರಾಜ್ ಎಂಬ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ. ಮೇ 5 ರಿಂದ ಸೆಲ್ವರಾಜ್ ಅವರು ಜಿಲ್ಲಾ ಪಂಚಾಯತ್ ಚುಕ್ಕಾಣಿ ಹಿಡಿದಿದ್ದಾರೆ.
ಇದನ್ನೂ ಓದಿ: ಬೀದಿಗೆ ಹಾಸಿಗೆ ತಂದು ಸರ್ಕಾರದ ವಿರುದ್ಧ ವಾಟಾಳ್ ಪ್ರತಿಭಟನೆ!
ಸರ್ಕಾರಗಳು ಆರು ತಿಂಗಳ ಕಾಲ ಚುನಾವಣೆಯನ್ನು ಮುಂದೂಡುವ ಅಧಿಕಾರವನ್ನು ಹೊಂದಿವೆ. ಆರು ತಿಂಗಳ ಒಳಗಾಗಿ ಕೋವಿಡ್ ನಿಯಂತ್ರಣಕ್ಕೆ ಬಂದಲ್ಲಿ ಚುನಾವಣೆ ನಡೆಯಲಿದೆ. ಒಂದು ವೇಳೆ ಕೋವಿಡ್ ನಿಯಂತ್ರಣಕ್ಕೆ ಬರದಿದಲ್ಲಿ ಮುಂದೇನು ಎಂಬ ಸಮಸ್ಯೆ ಎಲ್ಲ ರಾಜಕೀಯ ಪಕ್ಷಗಳನ್ನು ಕಾಡಲಾರಂಭಿಸಿದೆ. ಕೋವಿಡ್ ಅವಧಿಯಲ್ಲಿ ಜಿಲ್ಲಾ ಪಂಚಾಯತ್ನಲ್ಲಿ ಜನಪ್ರತಿನಿಧಿಗಳಿದ್ದರೆ ಜನರ ಸೇವೆಗೆ ಹೆಚ್ಚಿನ ಅವಕಾಶವಾಗುತ್ತಿತ್ತು. ಆದರೆ, ಇದೇ ಸಮಯಕ್ಕೆ ಅಧಿಕಾರಾವಧಿ ಮುಗಿದಿದ್ದು, ಆಡಳಿತಾಧಿಕಾರಿ ನೇಮಕವಾಗಿದೆ.