ಶಿವಮೊಗ್ಗ: ಎರಡು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬಸ್ ಚಾಲಕ ಸೇರಿದಂತೆ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕು ಚೋರಡಿ ಸೇತುವೆ ಬಳಿ ಗುರುವಾರ ಸಂಜೆ ನಡೆದಿದೆ. ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕಾಳಪ್ಪ ಬಸ್ ಹಾಗೂ ಶಿವಮೊಗ್ಗದಿಂದ ಶಿಕಾರಿಪುರಕ್ಕೆ ತೆರಳುತ್ತಿದ್ದ ಶ್ರೀನಿವಾಸ ಬಸ್ಗಳು ಮುಖಾಮುಖಿ ಡಿಕ್ಕಿಯಾಗಿವೆ.
ಡಿಕ್ಕಿ ರಭಸಕ್ಕೆ ಕಾಳಪ್ಪ ಬಸ್ನ ಚಾಲಕ ಸಿದ್ದಪ್ಪ ಹಾಗೂ ಓರ್ವ ಪ್ರಯಾಣಿಕ ತಿಪ್ಪೇಸ್ವಾಮಿ ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಶ್ರೀನಿವಾಸ ಬಸ್ನ ಚಾಲಕ ಸೇರಿ ಎರಡು ಬಸ್ನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ಗಳ ಮುಖಾಮುಖಿ ಡಿಕ್ಕಿಯಿಂದ ಕೆಲಕಾಲ ಶಿವಮೊಗ್ಗ ಸಾಗರ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್ ಆಗಿತ್ತು. ಸ್ಥಳಕ್ಕೆ ಕುಂಸಿ ಪೊಲೀಸ್ ಠಾಣೆಯ ಪಿಐ ತಿಪ್ಪೇಸ್ವಾಮಿ ಭೇಟಿ ನೀಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಸಂಸದ ಬಿ.ವೈ ರಾಘವೇಂದ್ರ ಹಾಗೂ ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಬಿ.ವೈ ವಿಜಯೇಂದ್ರ ಅವರು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಕಾರು ಹಾಗೂ ಟಿಟಿ ವಾಹನ ನಡುವೆ ಪರಸ್ಪರ ಡಿಕ್ಕಿ: ಗುರುವಾರ ಚಿಕ್ಕಮಗಳೂರಿನ ಕಡೂರು ತಾಲೂಕಿನ ಮತಿಘಟ್ಟ ಕ್ರಾಸ್ ಬಳಿಯ ಬೆಂಗಳೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಕಾರು ಹಾಗೂ ಟಿಟಿ ವಾಹನ ನಡುವೆ ಪರಸ್ಪರ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮಯಾಂಕ್(3) ಹಾಗೂ ಗಿರಿಧರ್ (46) ಎಂಬುವವರೇ ಮೃತರು ಎಂಬುದು ತಿಳಿದುಬಂದಿದೆ. ಅಪಘಾತದ ವೇಳೆ ಟಿಟಿ ವಾಹನ ಪಲ್ಟಿಯಾಗಿದೆ. ಟಿಟಿ ವಾಹನದಲ್ಲಿದ್ದ ಕೇರಳ ಮೂಲದ 7 ಪ್ರವಾಸಿಗರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಈಗಾಗಲೇ ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ.
ಗಿರಿಧರ್ ಕುಟುಂಬವು ಹೊನ್ನಾವರದಿಂದ ಸಂಬಂಧಿಕರ ಮದುವೆಗೆ ತೆರಳುತ್ತಿದ್ದರೆ, ಕೇರಳದಿಂದ ಚಿಕ್ಕಮಗಳೂರಿಗೆ ಟಿಟಿ ವಾಹನ ಪ್ರವಾಸಕ್ಕೆ ಬರುತ್ತಿತ್ತು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಪರಸ್ಪರ ಡಿಕ್ಕಿಯಾಗಿದೆ. ಪರಿಣಾಮ ಈ ದುರಂತ ಸಂಭವಿಸಿದೆ . ಚಿಕ್ಕಮಗಳೂರು ಜಿಲ್ಲೆಯ ಕಡೂರು ಪೊಲೀಸ್ ಠಾಣೆಯಲ್ಲಿ ಘಟನೆಯ ಬಗ್ಗೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ರಾಜ್ಯದ ವಿವಿಧೆಡೆ ಭೀಕರ ರಸ್ತೆ ಅಪಘಾತ: ಐವರು ಸಾವು