ಶಿವಮೊಗ್ಗ: ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ವಿರುದ್ಧ ಆರಗ ಜ್ಞಾನೇಂದ್ರ 12,241 ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ವಿರುದ್ಧ ಗೆಲುವು ಸಾಧಿಸುವ ಮೂಲಕ ಐದನೇ ಬಾರಿಗೆ ತೀರ್ಥಹಳ್ಳಿ ಕ್ಷೇತ್ರದಲ್ಲಿ ಆರಗ ಕಲಮ ಅರಳಿಸಲು ಯಶಸ್ವಿಯಾಗಿದ್ದಾರೆ. ಒಂದೇ ವಿಧಾನಸಭಾ ಕ್ಷೇತ್ರ, ಒಂದೇ ಪಕ್ಷದಿಂದ ಸತತ 10ನೇ ಬಾರಿಗೆ ಆರಗ ಜ್ಞಾನೇಂದ್ರ ಸ್ಪರ್ಧೆ ಮಾಡಿದ್ದರು. ತೀರ್ಥಹಳ್ಳಿಯಲ್ಲಿ ಸತತ ಒಂದೇ ಪಕ್ಷದಿಂದ ಸ್ಪರ್ಧಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿ, 2018 ರಲ್ಲಿ ಸೇರಿ ಒಟ್ಟು ಐದನೇ ಬಾರಿ ಗೆಲುವು ಸಾಧಿಸಿದ್ದಾರೆ. ಗೃಹ ಸಚಿವರಾಗಿ ಕರ್ತವ್ಯ ನಿರ್ವಹಿಸಿದ ಹೆಮ್ಮೆ ಆರಗ ಜ್ಞಾನೇಂದ್ರರಿಗೆ ಇದೆ.
ಆರಗ ಜ್ಞಾನೇಂದ್ರ ರವರ ಪೂರ್ಣ ಪರಿಚಯ: ಆರಗ ಜ್ಞಾನೇಂದ್ರ ರವರು 1951ರ ಮಾರ್ಚ್ 15 ರಂದು ಜನಿಸಿದರು. ಇವರ ತಂದೆ ಹೆಸರು ರಾಮಣ್ಣ ಗೌಡ. ತಾಯಿ ಚಿನ್ನಮ್ಮ. ಪತ್ನಿ ಪ್ರಫುಲ್ಲ. ಇವರಿಗೆ ಇಬ್ಬರು ಮಕ್ಕಳು ಪುತ್ರ ಅಭಿನಂದನ್ ಹಾಗೂ ಪುತ್ರಿ ಅನನ್ಯ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಸ್ವಂತ ಗ್ರಾಮವಾದ ಆರಗದಲ್ಲಿ ಮುಗಿಸಿದರು. ನಂತರ ಕೋಣಂದೂರಿನ ರಾಷ್ಟ್ರೀಯ ಶಿಕ್ಷಣ ಸಮಿತಿ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಅಂದ್ರೆ 8 ರಿಂದ ಪಿಯುಸಿವರೆಗೂ ಮುಗಿಸಿದರು. ನಂತರ ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಶಿಕ್ಷಣ ಸಮಿತಿಯ ಆಚಾರ್ಯ ತುಳಸಿ ವಾಣಿಜ್ಯ ಕಾಲೇಜಿನಲ್ಲಿ ಬಿ.ಕಾಂ ಪದವಿ ಮುಗಿಸಿದರು.
ಬಿ.ಕಾಂ ಪದವಿಯಲ್ಲೇ ವಿದ್ಯಾರ್ಥಿ ನಾಯಕರಾಗಿ 1975 ರಲ್ಲಿ ಆಯ್ಕೆಯಾಗಿದ್ದಾರೆ. ಸ್ಥಳೀಯ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ಕಾರ್ಯನಿರ್ವಹಿಸಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಆರ್ಎಸ್ಎಸ್ ಜೊತೆ ನಿಕಟ ಸಂಪರ್ಕವನ್ನು ಹೊಂದಿದ್ದರು. ಕಾಲೇಜು ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಸಂಪರ್ಕದಲ್ಲಿದ್ದು, ಜಿಲ್ಲಾ ಪರಿಷತ್ ನ ಜಿಲ್ಲಾಧ್ಯಕ್ಷರಾಗಿದ್ದರು. 1975ರ ತುರ್ತು ಪರಿಸ್ಥಿತಿಯ ಹೋರಾಟದಲ್ಲಿ 6 ತಿಂಗಳ ಜೈಲು ವಾಸ ಅನುಭವಿಸಿದ್ದರು. ನಂತರ 1975 ರಲ್ಲಿ ತೀರ್ಥಹಳ್ಳಿ ತಾಲೂಕು ಬೋರ್ಡ್ ಚುನಾಬಣೆಯಲ್ಲಿ ಆಯ್ಕೆಯಾಗಿ ಸಕ್ರೀಯ ರಾಜಕೀಯಕ್ಕೆ ಪ್ರವೇಶ ಪಡೆದುಕೊಂಡರು.
ಚುನಾವಣಾ ರಾಜಕೀಯಕ್ಕೆ ಪ್ರವೇಶ: ಆರಗ ಜ್ಞಾನೇಂದ್ರ ರವರು 1983 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು. ಅಲ್ಲದೆ ಸತತವಾಗಿ 1985 ಹಾಗೂ1989 ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು. ಸತತ ಸೋಲನ್ನು ಕಂಡರು ಸಹ ಆರಗ ಜ್ಞಾನೇಂದ್ರರನ್ನು ಪಕ್ಷ ಜಿಲ್ಲಾಧ್ಯಕ್ಷರಾನ್ನಾಗಿ ಮಾಡಿತ್ತು.
ಈ ನಡುವೆ ಶಿವಮೊಗ್ಗ ಪರಿಷತ್ಗೆ 1986 ರಲ್ಲಿ ಸ್ಪರ್ಧಿಸಿ ಜಯಗಳಿಸುತ್ತಾರೆ. ನಂತರ 1991ರಲ್ಲಿ ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದಾರೆ. ಸತತ ಮೂರು ಸೋಲಿನ ನಂತರ 1994 ರಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗುತ್ತಾರೆ. 1994, 1999 ಹಾಗೂ 2004 ರಲ್ಲಿ ಇವರು ಹ್ಯಾಟ್ರಿಕ್ ಗೆಲುವು ಸಾಧಿಸುತ್ತಾರೆ. 2008 ಹಾಗೂ 2013 ರಲ್ಲಿ ಮತ್ತೆ ಎರಡು ಬಾರಿ ಸೋಲನ್ನು ಅನುಭವಿಸುತ್ತಾರೆ.
2018 ರಲ್ಲಿ ನಡೆದ ಚುನಾವಣೆಯಲ್ಲಿ ಗೆಲುವನ್ನು ಕಾಣುತ್ತಾರೆ. 2019 ರಲ್ಲಿ ತಮ್ಮ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. 2019 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಇವರನ್ನು ಭದ್ರಾವತಿಯ ಮೈಸೂರು ಪೇಪರ್ ಮಿಲ್ನ ಅಧ್ಯಕ್ಷರನ್ನಾಗಿ ಮಾಡಲಾಗುತ್ತದೆ. 2019 ರಲ್ಲಿ ಗೃಹ ಮಂತ್ರಿಯಾಗುವ ಮುನ್ನ ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಬಿಜೆಪಿ ರೈತ ಮೂರ್ಚಾದ ಅಧ್ಯಕ್ಷರಾಗಿ, ಅಡಕೆ ಟಾಸ್ಕೋ ಪೋರ್ಸ್ ಅಧ್ಯಕ್ಷರಾಗಿ ಆರಗ ಸೇವೆ ಸಲ್ಲಿದ್ದಾರೆ.
ರಾಜ್ಯದಲ್ಲಿ ಯಡಿಯೂರಪ್ಪನವರ ಜೊತೆ ಚುನಾವಣೆಗೆ ಸ್ಪರ್ಧಿಸಿದ ಕೆಲವೇ ಕೆಲವು ಮಂದಿಯಲ್ಲಿ ಆರಗ ಜ್ಞಾನೇಂದ್ರ ಸಹ ಒಬ್ಬರು. ಪಕ್ಷ ನಿಷ್ಟೆ, ಪ್ರಾಮಾಣಿಕ ಸೇವೆ ಸಂಘ ಪರಿವಾರದ ನಿಕಟ ಸಂಪರ್ಕದಿಂದ ಆರಗ ಜ್ಞಾನೇಂದ್ರ ಪಕ್ಷದಲ್ಲಿ ಉನ್ಜತ ಸ್ಥಾನಕ್ಕೆ ಏರಿದ್ದಾರೆ. ಈ ಬಾರಿ ತಮ್ಮ ಕೊನೆಯ ಚುನಾವಣೆಯಲ್ಲಿ ಸ್ಫರ್ಧಿಸಿ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ:ದಕ್ಷಿಣ ಕನ್ನಡದಲ್ಲಿ ಬಿಜೆಪಿ ಮೇಲುಗೈ; ಬಲ ಹೆಚ್ಚಿಸಿಕೊಂಡ ಕಾಂಗ್ರೆಸ್