ಶಿವಮೊಗ್ಗ: ಹಸುಗಳಲ್ಲಿ ಮಲೆನಾಡಿನ ಗಿಡ್ಡ ತಳಿಗೆ ವಿಶೇಷ ಸ್ಥಾನವಿದೆ. ಇದು ತನ್ನ ಧೀರ್ಘಾಯುಷ್ಯದಿಂದಲೇ ಪ್ರಸಿದ್ಧಿ ಪಡೆದಿದೆ. ಅದರಂತೆ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪ ಸಮೀಪದ ಮುಸುವಳ್ಳಿ ಗ್ರಾಮದ ಕೌಲೆ ಹೆಸರಿನ ಮಲೆನಾಡು ಗಿಡ್ಡ ತಳಿಯು 36 ವರ್ಷ ಬದುಕಿ ತನ್ನ ಪಯಣವನ್ನು ಸೋಮವಾರ ಮುಗಿಸಿದೆ.
ಮುಸುವಳ್ಳಿಯ ನಾರಾಯಣ ಭಟ್ಟರ ಮನೆಯ ಮಲೆನಾಡು ಗಿಡ್ಡದ ಕಪಿಲೆ ತಳಿಯ ಕೌಲೆ ಎಂಬ ಹಸು ಸೋಮವಾರ ಸಾವನ್ನಪ್ಪಿದೆ. ಈ ಕೌಲೆ ಹಸುವು ಹಸುಗಳ ಇತಿಹಾಸದಲ್ಲಿಯೇ ಅತಿಹೆಚ್ಚು ವರ್ಷ ಬದುಕಿದ ಸಾಲಿಗೆ ಸೇರ್ಪಡೆಯಾಗಿದೆ.
ಸಾಮಾನ್ಯವಾಗಿ ಮಿಶ್ರ ತಳಿಯ ಹಸುಗಳು 15 ರಿಂದ 20 ವರ್ಷ ಬದುಕುತ್ತವೆ. ಅದೇ ದೇಸಿ ತಳಿಯ ಹಸುಗಳು 20 ರಿಂದ 25 ವರ್ಷಗಳ ಕಾಲ ಬದುಕುತ್ತವೆ. ಆದರೆ, ಕೌಲೆ ಹಸು ಬರೋಬ್ಬರಿ 36 ವರ್ಷ ಬದುಕಿ ಇತಿಹಾಸದ ಪುಟ ಸೇರಿದೆ. ಕೌಲೆ ಹಸು ತನ್ನ ಜೀವಿತದ ಅವಧಿಯಲ್ಲಿ 14 ಕರುಗಳಿಗೆ ಜನ್ಮ ನೀಡಿದೆ.
ನಾರಾಯಣ ಭಟ್ಟರ ಮನೆಯಲ್ಲಿ ಹಳ್ಳಿಕಾರ್ ತಳಿಯ ಹಸುವೊಂದು 32 ವಸಂತ ಪೂರೈಸಿ ಕಳೆದ ಆರು ತಿಂಗಳ ಹಿಂದಷ್ಟೆ ಸಾವನ್ನಪ್ಪಿತ್ತು. ಇದು ಸುಮಾರು 11 ಕರುಗಳಿಗೆ ಜನ್ಮ ನೀಡಿತ್ತು. ಜನವರಿಯಲ್ಲಿ ಹೊಸನಗರ ತಾಲೂಕಿನ ನಿಟ್ಟೂರಿ ಕೊಳಕಿ ಗ್ರಾಮದ ವಿಶ್ವೇಶ್ವರ ಹೆಗಡೆ ಅವರ ಮನೆಯ ಮಲೆನಾಡು ಗಿಡ್ಡ ತಳಿ ಬೆಳ್ಳಿ ಹಸು 32 ವಸಂತಗಳನ್ನು ಪೂರೈಸಿ, 15ಕ್ಕೂ ಹೆಚ್ಚು ಕರುಗಳಿಗೆ ಜನ್ಮ ನೀಡಿ ಸಾವನ್ನಪ್ಪಿತ್ತು.
ಬುಕ್ ಆಫ್ ರೆಕಾರ್ಡ್ ಸೇರದ ಹಸುಗಳು: ಮಲೆನಾಡಿನಲ್ಲಿ ಹೆಚ್ಚು ಜನರು ಹಸುಗಳ ಜನ್ಮ ದಿನಾಂಕ, ಅವುಗಳ ವಯಸ್ಸು, ಅವುಗಳ ಕರುಗಳ ಜನನದ ದಿನಾಂಕ ಅಷ್ಟು ನಿಖರವಾಗಿ ಬರೆದಿಡದ ಕಾರಣ ದಾಖಲೆ ಸಿಗುವುದಿಲ್ಲ. ಹಾಗಾಗಿ ಈ ಹಸುಗಳ ಆಯಸ್ಸು ಮತ್ತು ಜೀವಿತಾವಧಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆಯಾಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ಅಮೆರಿಕ ಸೇನೆಗೆ ಸೇರ್ಪಡೆಯಾಗಿ ಅಪರೂಪದ ಇತಿಹಾಸ ಬರೆದ ಕಾಲಿವುಡ್ ನಟಿ!