ಶಿವಮೊಗ್ಗ: ನಾಯಿಯೊಂದು ಅಪರಿಚಿತ ಹೆಣ್ಣು ನವಜಾತ ಶಿಶುವನ್ನು ಬಾಯಿಯಲ್ಲಿ ಕಚ್ಚಿಕೊಂಡು ತಿರುಗಾಡಿದ ಘಟನೆ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ. ನಾಯಿ ತನ್ನ ಬಾಯಿಯಲ್ಲಿ ಶಿಶುವನ್ನು ಹಿಡಿದುಕೊಂಡು ಓಡಾಡುತ್ತಿರುವುದನ್ನು ಭದ್ರತಾ ಸಿಬ್ಬಂದಿ ಗಮನಿಸಿ, ಅದನ್ನು ಓಡಿಸಿದ್ದಾರೆ. ಆದರೆ, ಅಷ್ಟರಲ್ಲೇ ಶಿಶು ಮೃತಪಟ್ಟಿರುವುದು ಗೊತ್ತಾಗಿದೆ.
ಮಾರ್ಚ್ 31ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಾಯಿಯು ನವಜಾತ ಶಿಶುವನ್ನು ಹಿಡಿದುಕೊಂಡು ಶರಾವತಿ ಹೆರಿಗೆ ವಾರ್ಡ್ ಬಳಿ ಓಡಾಡಿದೆ. ನಾಯಿ ಬಿಟ್ಟು ಹೋದ ನಂತರ ಶಿಶುವನ್ನು ಪರೀಕ್ಷಿಸಿದಾಗ ಮಗು ಸಾವನ್ನಪ್ಪಿರುವುದು ಖಚಿತವಾಗಿದೆ. ಆದರೆ, ಮಗು ಯಾರದ್ದು?, ಯಾರು ಬಿಟ್ಟು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಆಗಷ್ಟೇ ಜನಿಸಿದ ಶಿಶುವನ್ನು ಆಸ್ಪತ್ರೆಯ ಹೆರಿಗೆ ವಾರ್ಡ್ನ ಹಿಂಭಾಗದಲ್ಲಿ ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ, ನಾಯಿ ಕಚ್ಚುವ ಮೊದಲೇ ಶಿಶು ಮೃತಪಟ್ಟಿತ್ತೋ, ನಾಯಿಯೇ ಕಚ್ಚಿದ್ದರಿಂದ ಶಿಶು ಸಾವನ್ನಪ್ಪಿದೆಯಾ ಎಂಬುದರ ಬಗ್ಗೆ ಮಾಹಿತಿ ಗೊತ್ತಾಗಬೇಕಿದೆ. ಸದ್ಯ ಇಡೀ ಘಟನೆ ಆಸ್ಪತ್ರೆಯವರು ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಜಿಲ್ಲಾಸ್ಪತ್ರೆಯಲ್ಲಿ ತಾಯಿ ಪಕ್ಕ ಮಲಗಿದ್ದ 3 ತಿಂಗಳ ಮಗುವನ್ನು ಕಚ್ಚಿ ಕೊಂದ ಬೀದಿನಾಯಿ!