ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆ ಮೊದಲಿನಿಂದಲೂ ಆಸ್ತಿ ಖರೀದಿ ಹಾಗೂ ಮಾರಾಟದಲ್ಲಿ ಮುಂಚೂಣಿಯಲ್ಲಿದೆ. ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ಹಿಂದಿನಿಂದಲೂ ಚೆನ್ನಾಗಿಯೇ ನಡೆದುಕೊಂಡು ಬಂದಿದೆ. ಜಿಲ್ಲಾ ಕೇಂದ್ರ ಶಿವಮೊಗ್ಗದಲ್ಲಿ ಭೂಮಿ ಮಾರಾಟ ಹಾಗೂ ಖರೀದಿ ಜೋರಾಗಿದೆ. ನಗರದ ಸುತ್ತಮುತ್ತಲಿನ ಭಾಗದಲ್ಲಿ ಭೂಮಿಯ ವ್ಯವಹಾರ ನಡೆಯುತ್ತಿದೆ.
ಶಿವಮೊಗ್ಗ-ಹೊನ್ನಾಳಿ ರಸ್ತೆ ಹಾಗೂ ಸಾಗರ ರಸ್ತೆಗಳಲ್ಲಿ ರಿಯಲ್ ಎಸ್ಟೇಟ್ ಬಿರುಸಿನಿಂದ ಸಾಗುತ್ತಿದೆ. ಈ ಭಾಗದಲ್ಲಿ ಹೆಚ್ಚಾಗಿ ಕೃಷಿ ಭೂಮಿ ಇರುವುದರಿಂದ ರಸ್ತೆ ಪಕ್ಕದ ಕೃಷಿ ಭೂಮಿಗೆ ಎಕರೆಗೆ 1.50 ಕೋಟಿ ರೂ. ಇದೆ. ನಗರ ಪ್ರದೇಶಗಳಿಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಪ್ರತಿ ಎಕರೆಗೆ 2 ಕೋಟಿ ರೂ. ಇದೆ. ಭೂಮಿ ವ್ಯವಹಾರ ನಡೆಸುವವರಿಗೆ ಉತ್ತಮ ಕಮಿಷನ್ ದೊರಕುತ್ತಿದೆ.
ರಾಜ್ಯ ಸರ್ಕಾರ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ನಿವೇಶನ, ಕಟ್ಟಡ, ಭೂಮಿ ಮತ್ತಿತರ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಿದ್ದರಿಂದ ಸಾರ್ವಜನಿಕ ವಲಯದಲ್ಲಿ ಹೆಚ್ಚು ವಿರೋಧ ವ್ಯಕ್ತವಾಗಿಲ್ಲ. ಆದರೆ, ಮುಂದೆ ವಿರೋಧ ಹೆಚ್ಚಾಗಬಹುದು. ಇಲ್ಲಿ ಮಾರಾಟ ಮಾಡುವವನಿಗೆ ಸಂತಸವಾದರೆ, ಕೊಂಡುಕೊಳ್ಳುವವನಿಗೆ ಶುಲ್ಕ ಏರಿಕೆ ಸಮಸ್ಯೆಯಾಗಿದೆ. ಶುಲ್ಕ ಏರಿಕೆಯಿಂದ ಪತ್ರಗಳಲ್ಲಿ ದರ ಏರಿಕೆ ಮಾಡಲಾಗಿದೆ. ರಾಜ್ಯ ಸರ್ಕಾರ 2019ರಿಂದ ಸ್ಥಿರಾಸ್ತಿ ಶುಲ್ಕ ಹೆಚ್ಚಳ ಮಾಡಿರಲಿಲ್ಲ. ಇದರಿಂದಾಗಿ ಇರುವ ನ್ಯೂನತೆಗಳನ್ನು ಸರಿಪಡಿಸಿ ಕಾವೇರಿ-2 ತಂತ್ರಾಂಶವನ್ನು ಜಾರಿ ಮಾಡಿದೆ. ಅಲ್ಲದೇ, ಹಿಂದೆ ಇರುತ್ತಿದ್ದ ಸರ್ವರ್ ಸಮಸ್ಯೆ ಕೂಡ ಈಗಿಲ್ಲ. ಇದರಿಂದ ನೋಂದಣಿ ಯಾವುದೇ ತೊಂದರೆ ಇಲ್ಲದೆ ನಡೆಯುತ್ತಿದೆ.
ಕೋವಿಡ್ ನಂತರದಲ್ಲಿ ನೋಂದಣಿ ಕಡಿಮೆ ಆಗಿದ್ದರೂ ಸಹ ಇತ್ತೀಚೆಗೆ ಚೇತರಿಕೆ ಕಂಡುಬಂದಿದೆ. ರಾಜ್ಯ ಸರ್ಕಾರ ನೋಂದಣಿ ಶುಲ್ಕ ಹೆಚ್ಚಿಸಬೇಕೆಂದು ಸೆಪ್ಟೆಂಬರ್‌ನಲ್ಲಿ ಸ್ಥಿರಾಸ್ತಿ ಶುಲ್ಕ ಹೆಚ್ಚಳ ಮಾಡುವ ಸಲುವಾಗಿ ಆಫರ್ ನೀಡಿತ್ತು. ನೋಂದಣಿಗೆ ಬೆಳಿಗ್ಗೆ 8ರಿಂದ ರಾತ್ರಿ 8ರತನಕ ಅವಕಾಶ ನೀಡಲಾಗಿತ್ತು. ಇದರಿಂದ ಈಗ ಸ್ವಲ್ಪಮಟ್ಟಿಗೆ ನೋಂದಣಿ ಕಡಿಮೆಯಾಗಿದೆ. ಇದು ಮುಂದೆ ಚೇತರಿಕೆ ಕಾಣಬಹುದು.
ಶಿವಮೊಗ್ಗ ನಗರದ ಗಾಂಧಿ ಬಜಾರ್ನಲ್ಲಿ ಸರ್ಕಾರಿ ದರದಂತೆ 15 ಸಾವಿರ ರೂ. ಇತ್ತು. ಈಗ ಅದು 18 ಸಾವಿರಕ್ಕೆ ಏರಿಕೆಯಾಗಿದೆ. ಹೆಚ್.ಹೆಚ್.ರಸ್ತೆಯಲ್ಲಿ 12 ಸಾವಿರ ಇತ್ತು, ಈಗ 15 ಸಾವಿರಕ್ಕೆ ಏರಿಕೆಯಾಗಿದೆ. ಉಳಿದಂತೆ, ನೆಹರು ರಸ್ತೆಯಲ್ಲಿ 8 ಸಾವಿರ ರೂ. ಇತ್ತು. ಅದು ಈಗ 12 ಸಾವಿರ ರೂ.ಗೆ ಬಂದಿದೆ.
ಜಿಲ್ಲಾ ನೋಂದಣಿ ಹಾಗೂ ಮುದ್ರಾಂಕ ಅಧಿಕಾರಿ ಗಿರೀಶ್ ಮಾತನಾಡಿ, "ಮುದ್ರಾಂಕ ಇಲಾಖೆಯಲ್ಲಿ ಸ್ಥಿರಾಸ್ತಿ ನೋಂದಣಿಯ ಮೂಲಕ ರಾಜಸ್ವ ಸಂಗ್ರಹ ಮಾಡಲಾಗುತ್ತದೆ. ಇದನ್ನು ಹೊರತುಪಡಿಸಿ ನೋಂದಣಿಯೇತರ ದಸ್ತಾವೇಜುಗಳ ಮೂಲಕ ರಾಜಸ್ವ ಸಂಗ್ರಹಣೆ ಮಾಡುತ್ತಿದ್ದೇವೆ. ಕಳೆದ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಿಂದ 170 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ ನೀಡಲಾಗಿತ್ತು. ಜಿಲ್ಲೆಯು 170 ಕೋಟಿ 30 ಸಾವಿರ ಸಂಗ್ರಹ ಮಾಡಿ ನೂರರಷ್ಟು ಸಾಧನೆ ಮಾಡಿತ್ತು. ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಿಂದ 285 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿಯನ್ನು ನಿಗದಿಪಡಿಸಲಾಗಿದೆ. ಪ್ರಸಕ್ತ ವರ್ಷದ ಏಪ್ರಿಲ್ನಿಂದ ಅಕ್ಟೋಬರ್ ವರೆಗೆ 137 ಕೋಟಿ ರೂ. ರಾಜಸ್ವ ಸಂಗ್ರಹ ನಿಗದಿ ಮಾಡಲಾಗಿತ್ತು. ಅದರಲ್ಲಿ 88.64 ಲಕ್ಷ ರೂ. ಗುರಿ ಮುಟ್ಟಿದ್ದೇವೆ" ಎಂದರು.
"ಕಳೆದ ತಿಂಗಳಿನಿಂದ ಸ್ಥಿರಾಸ್ತಿ ಮಾರ್ಗಸೂಚಿ ಬೆಲೆಯನ್ನು ಪರಿಷ್ಕರಣೆ ಮಾಡಲಾಗಿದೆ. 2019ರಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರವನ್ನು ನಿಗದಿ ಮಾಡಲಾಗಿತ್ತು. ಅಲ್ಲಿಂದ 5 ವರ್ಷಗಳಲ್ಲಿ ಇರುವಂತಹ ಹಲವು ನ್ಯೂನತೆಗಳನ್ನು ಸರಿಪಡಿಸಿ, ಮಾರ್ಗಸೂಚಿಯನ್ನು ಪರಿಷ್ಕರಣೆ ಮಾಡಲಾಗಿದೆ. ಹೀಗೆ ಪರಿಷ್ಕರಣೆ ಮಾಡಿದಾಗ ಶೇ. 35 ರಷ್ಟು ಸ್ಥಿರಾಸ್ತಿ ಮಾರುಕಟ್ಟೆ ದರ ಏರಿಕೆಯಾಗಿ ನಿಗದಿಯಾಗಿದೆ. 1-10-2023 ರಿಂದ ಹೊಸ ಮಾರ್ಗಸೂಚಿ ಜಾರಿಗೆ ಬಂದಿದೆ" ಎಂದು ಮಾಹಿತಿ ನೀಡಿದರು.
"ಪರಿಷ್ಕೃತ ಮಾರ್ಗಸೂಚಿಯಿಂದ ರಾಜಸ್ವ ಸಂಗ್ರಹಣೆ ಕುಂಠಿತವಾಗಿಲ್ಲ. ಅಕ್ಟೋಬರ್‌ನಲ್ಲಿ ನೋಂದಣಿಯಾಗಬೇಕಾದ ದಸ್ತಾವೇಜುಗಳು ಶೇ. 40 ರಷ್ಟು ಸೆಪ್ಟೆಂಬರ್ನಲ್ಲಿಯೇ ನೋಂದಣಿಯಾಗಿವೆ. ಪರಿಷ್ಕೃತ ಮಾರ್ಗಸೂಚಿ ಜಾರಿಗೆ ತರುವ ಮುನ್ನಾ ಸರ್ಕಾರ ನೋಂದಣಿಗೆ ಅವಕಾಶ ನೀಡಿತ್ತು. ಸೆಪ್ಟೆಂಬರ್‌ನಲ್ಲಿ 22 ಕೋಟಿ ರೂ. ರಾಜಸ್ವ ಸಂಗ್ರಹಣೆ ಆಗಿತ್ತು. ಅಕ್ಟೋಬರ್ ತಿಂಗಳಲ್ಲಿ ದಸರಾ ಹಾಗೂ ಪಿತೃಪಕ್ಷ ಬಂದ ಕಾರಣ ರಜೆ ಇದ್ದ ಹಿನ್ನೆಲೆಯಲ್ಲಿ ನೋಂದಣಿ ಪ್ರಮಾಣ ಕಡಿಮೆಯಾಗಿದೆ. ಮುಂದಿನ ತಿಂಗಳು ಗುರಿ ಸಾಧಿಸಲಾಗುವುದು" ಎಂದು ಹೇಳಿದರು.
ಜಿಲ್ಲಾ ಪತ್ರಬರಹಗಾರ ಸಂಘದ ಕಾರ್ಯದರ್ಶಿ ಸುರೇಶ್ ಬಾಬು ಪ್ರತಿಕ್ರಿಯಿಸಿ, "ಸ್ಥಿರಾಸ್ತಿ ಮಾರ್ಗಸೂಚಿ ದರ ಏರಿಕೆ ಮಾಡಿದ್ದು ಸಾರ್ವಜನಿಕರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಸಾರ್ವಜನಿಕರು, ಸ್ಥಿರಾಸ್ತಿ ಖರೀದಿಸುವವರು ಮುದ್ರಾಂಕ ಶುಲ್ಕವನ್ನು ಕಟ್ಟಿಕೊಂಡು ಹೋಗುತ್ತಿದ್ದಾರೆ. ದರ ಏರಿಕೆ ಮಾಡಿರುವುದಕ್ಕೆ ಸಾರ್ವಜನಿಕ ವಲಯದಿಂದ ಯಾವುದೇ ಬೇಸರ ವ್ಯಕ್ತವಾಗಿಲ್ಲ. ಕೆಲವು ಭಾಗದಲ್ಲಿ ಶೇ. 20 ಮತ್ತು ಶೇ. 40ರಂತೆ ಸ್ಥಿರಾಸ್ತಿ ದರ ಏರಿಕೆಯಾಗಿದೆ" ಎಂದರು.
"ಸ್ಥಿರಾಸ್ತಿ ಶುಲ್ಕ ಹೆಚ್ಚು ಮಾಡಿದ್ದಕ್ಕೆ ಸಾರ್ವಜನಿಕರು ಸ್ವಲ್ಪ ಮಟ್ಟಿನ ಆಕ್ರೋಶ ಹೊರಹಾಕಿದ್ದಾರೆ. ಸ್ಥಿರಾಸ್ತಿ ಶುಲ್ಕ ಹೆಚ್ಚಿಸಿದ್ದರಿಂದ ನಮಗೆ ಆಸ್ತಿ ಕೊಳ್ಳಲು ತೊಂದರೆ ಆಗುತ್ತಿದೆ. ಇಂದು ಆಸ್ತಿ ನೋಂದಣಿ ಮಾಡಿಕೊಳ್ಳಲು ಬಂದಿದ್ದೆವು. ಆದರೆ, ಶುಲ್ಕ ಹೆಚ್ಚಳದಿಂದ ನಾವು ನಾಳೆಗೆ ರಿಜಿಸ್ಟ್ರೇಷನ್ ಮುಂದೂಡಿಕೆ ಮಾಡಿದ್ದೇವೆ" ಎನ್ನುತ್ತಾರೆ ಕುಂಸಿ ಗ್ರಾಮದ ನಿವಾಸಿ ಮೋಹನ್.
ಇದನ್ನೂ ಓದಿ: ರಾಜ್ಯದಲ್ಲಿ ಬರದ ಛಾಯೆ: ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ಆರ್ಥಿಕ ಇಲಾಖೆ ಸಲಹೆ