ರಾಮನಗರ: 2006ರಲ್ಲಿ ನನ್ನ ಅಡ್ರೆಸ್ನ ಯಡಿಯೂರಪ್ಪ ಹುಡುಕಿಕೊಂಡು ಬಂದಿದ್ದರು. ನಾನೇನು ಅವರ ಅಡ್ರೆಸ್ ಹುಡುಕಿಕೊಂಡು ಹೋಗಿರಲಿಲ್ಲ. ಒಂದು ಮಂತ್ರಿ ಮಾಡಿ ಅಂತಾ ಬಂದಿದ್ದ ಕಾಲವೂ ಇತ್ತು. ಆದರೆ ಈಗ ನನ್ನ ಅಡ್ರೆಸ್ ಗೊತ್ತಿಲ್ಲದಿರಬಹುದು. ಜನ ನಮ್ಮ ಅಡ್ರೆಸ್ನ ಹುಡುಕಿಕೊಡ್ತಾರೆ. ಮುಂದಿನ ದಿನಗಳಲ್ಲಿ ಎಲ್ಲವನ್ನು ತೋರಿಸ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಬಿಎಸ್ವೈ ಹೇಳಿಕೆಗೆ ತಿರುಗೇಟು ನೀಡಿದರು.
ಚನ್ನಪಟ್ಟಣದ ಕ್ಷೇತ್ರ ಪ್ರವಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಮಳೂರುಪಟ್ಟಣ ಗ್ರಾಮದಲ್ಲಿ ಮಾತನಾಡಿ, ನಾನು ಕ್ಷೇತ್ರಕ್ಕೆ ಬರಲಾಗುತ್ತಿಲ್ಲ. ಆದರೆ ಅಭಿವೃದ್ಧಿಗೆ ಯಾವುದೇ ರೀತಿ ತೊಂದರೆಯಿಲ್ಲ. ಕೆಲವರ ವೈಯಕ್ತಿಕ ಸಮಸ್ಯೆಗಳನ್ನ ಕೇಳಲಾಗಿಲ್ಲ. ಹಾಗಾಗಿ ಜನವರಿಯಿಂದ ವಾರಕ್ಕೊಮ್ಮೆ ಕ್ಷೇತ್ರದ ಹಳ್ಳಿಗಳ ಪ್ರವಾಸ ಮಾಡ್ತೇನೆ. ಜನರಿಗೆ ಆಗಬೇಕಿರುವ ಕೆಲಸ ಕಾರ್ಯಗಳ ಬಗ್ಗೆ ಗಮನಹರಿಸುತ್ತೇನೆ ಎಂದರು.
ಸರ್ಕಾರ ಅಧಿಕಾರ ಕಳೆದುಕೊಂಡ ನಂತರ ನನ್ನ ಕಾಲದಲ್ಲಿ ಘೋಷಣೆಯಾಗಿದ್ದ ಯೋಜನೆಗಳಿಗೂ ಯಾವುದೇ ತೊಂದರೆಯಿಲ್ಲ. ಈಗಾಗಲೇ ಸಂಬಂಧಪಟ್ಟ ಸಚಿವರ ಬಳಿ ಈ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದರು.
ಮಂಗಳೂರು ಗೋಲಿಬಾರ್ ವಿಡಿಯೋ ವೈರಲ್ ಪ್ರಕರಣ ಅದು ಸತ್ಯವೋ, ಅಸತ್ಯವೋ ಎಂಬುದು ತನಿಖೆಯಾಗಲಿ. ಗಲಭೆ ನಡೆಸುವವರಿಗೆ ನನ್ನ ಬೆಂಬಲವಿಲ್ಲ. ಆದರೆ ಗಲಭೆಯಾದ ದಿನವೇ ಈ ವಿಡಿಯೋ ಯಾಕೆ ಕೊಡಲಿಲ್ಲ. ಸಿಎಂ ಹಾಗೂ ಪೊಲೀಸರ ಹೇಳಿಕೆಯಲ್ಲೇ ಗೊಂದಲ ಇದೆ. ಆದರೆ ಇವರ ಮಾತು ಕೇಳಲು ನಾವು ಹೂ ಮುಡಿದುಕೊಂಡಿಲ್ಲ ಎಂದರು.
ಇದೇ ವೇಳೆ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ನಾನೇನು ಅವರನ್ನು ಹಿಡಿದುಕೊಂಡಿಲ್ಲ. ಜಿಲ್ಲೆಯ ಅಭಿವೃದ್ಧಿ ಮಾಡಲು ಅವರು ನನಗಿಂತಲೂ ಬುದ್ಧಿವಂತರಿದ್ದಾರೆಂಬುದು ಗೊತ್ತಿದೆ. ನಾನು ಸುಳ್ಳು ಸರ್ಟಿಫಿಕೇಟ್ನ ಯಾರಿಗೂ ಕೊಡಿಸಿಲ್ಲ. ರಾಜ್ಯದಲ್ಲಿ ಅವರಿಗೆ ನರಸರಾಜ್ ಎಂಬ ಬಿರುದಿದೆ. ಅದು ಯಾಕೆ ಅನ್ನೋದನ್ನ ಅವರು ಅರಿತುಕೊಳ್ಳಲಿ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ಗೆ ಟಾಂಗ್ ನೀಡಿದರು.