ಇತ್ತೀಚಿಗೆ ದೇಶದ ವಿಮಾನಯಾನ ಸಂಸ್ಥೆಗಳು, ನಿಲ್ದಾಣಗಳಿಗೆ ಹುಸಿ ಬಾಂಬ್ ಕರೆಗಳನ್ನು ಮಾಡಿದ್ದು, ದೊಡ್ಡ ಸದ್ದು ಮಾಡಿತ್ತು. ಅದೇ ರೀತಿ ಬಾಲಿವುಡ್ನಲ್ಲೂ ಬೆದರಿಕೆಯ ಸಂದೇಶ, ಕರೆಗಳು ಆತಂಕಕ್ಕೆ ಕಾರಣವಾಗಿದೆ. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಬೆನ್ನಲ್ಲೇ ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಕಿಂಗ್ ಖಾನ್ ಶಾರುಖ್ ಅವರಿಗೂ ಕೊಲೆ ಬೆದರಿಕೆ ಬಂದಿದೆ. ಇದು ಅಭಿಮಾನಿಗಳಲ್ಲಿ ಕಳವಳ ಮೂಡಿಸಿದೆ.
ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್‌ಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಅಪರಿಚಿತ ವ್ಯಕ್ತಿಯ ವಿರುದ್ಧ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 506(4) ಮತ್ತು 351(3)(4)ರ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.
Shah Rukh Khan threat case | As per Mumbai Police, the threat call was placed at Bandra Police Station itself, Rs 50 Lakhs was demanded and a life threat to the actor was made if the payment was not done. https://t.co/FPk4vCvgan
— ANI (@ANI) November 7, 2024
ಖ್ಯಾತ ನಟ ಶಾರುಖ್ ಖಾನ್ ಅವರಿಗೆ ಬೆದರಿಕೆ ಕರೆ ಬಂದಿರುವುದನ್ನು ಮುಂಬೈ ಪೊಲೀಸರು ಇಂದು ದೃಢಪಡಿಸಿದ್ದಾರೆ. ಛತ್ತೀಸ್‌ಗಢದ ರಾಯ್‌ಪುರದಿಂದ ಕರೆ ಬಂದಿರೋದನ್ನು ಪೊಲೀಸರು ಪತ್ತೆ ಹಚ್ಚಿದ್ದು, ತಂಡವು ತಮ್ಮ ತನಿಖೆಯನ್ನು ಮುಂದುವರಿಸೋ ನಿಟ್ಟಿನಲ್ಲಿ ಅಲ್ಲಿಗೆ ತೆರಳಿದೆ ಎಂದು ವರದಿಯಾಗಿದೆ.
ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಸಲ್ಮಾನ್ ಖಾನ್ ಅವರಿಗೆ ಇತ್ತೀಚೆಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಕೊಲೆ ಬೆದರಿಕೆಗಳು ಬಂದಿದ್ದವು. ಕ್ಷಮೆಯಾಚಿಸಬೇಕು ಅಥವಾ 5 ಕೋಟಿ ರೂಪಾಯಿ ನೀಡಬೇಕೆಂದು ತಮ್ಮ ಬೇಡಿಕೆ ಇಟ್ಟಿದ್ದರು. ಬೆದರಿಕೆ ಹಿನ್ನೆಲೆಯಲ್ಲಿ ಭಾಯ್ಜಾನ್ಗೆ ಭದ್ರತೆಯನ್ನು ಮುಂಬೈ ಪೊಲೀಸರು ಹೆಚ್ಚಿಸಿದ್ದಾರೆ.
ಇದನ್ನೂ ಓದಿ: ಅನಾರೋಗ್ಯ: ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಶಿವರಾಜ್ಕುಮಾರ್
ಇತ್ತೀಚೆಗೆ ಬಾಲಿವುಡ್ ಸೆಲೆಬ್ರಿಟಿಗಳ ವಿರುದ್ಧ ಬಂದಿರುವ ಕೊಲೆ ಬೆದರಿಕೆಗಳು ಅವರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸಿವೆ. ಪೊಲೀಸರು ಈ ಕೊಲೆ ಬೆದರಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಕಿಡಿಗೇಡಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಪ್ಯಾನ್ ಇಂಡಿಯಾ ಕ್ರೇಜ್ನಿಂದ ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಹೊಡೆತ: ನಿರ್ದೇಶಕ ಓಂ ಸಾಯಿಪ್ರಕಾಶ್
ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಹಾವೇರಿಯಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಆರೋಪಿಯನ್ನು ಬಿಕಾರಾಮ್ ಎಂದು ಗುರುತಿಸಲಾಗಿದೆ. ಈತನನ್ನು ಹಾವೇರಿ ನಗರದಲ್ಲಿ ಬಂಧಿಸಲಾಗಿದೆ.
ರಾಜಸ್ಥಾನದ ಮೂಲದ ಬಿಕಾರಾಮ್ ಒಂದೂವರೆ ತಿಂಗಳ ಹಿಂದೆ ಕೂಲಿ ಕೆಲಸಕ್ಕೆಂದು ಹಾವೇರಿ ನಗರಕ್ಕೆ ಬಂದಿದ್ದ. ಇಲ್ಲಿನ ಗೌಡರ ಓಣಿಯಲ್ಲಿನ ರೂಮ್ನಲ್ಲಿ ಕೂಲಿಕಾರರೊಂದಿಗೆ ವಾಸವಾಗಿದ್ದುಕೊಂಡು ಗ್ರಿಲ್ ಕೆಲಸ ಮಾಡಿಕೊಂಡಿದ್ದ.
ಮಹಾರಾಷ್ಟ್ರದ ಪೊಲೀಸರ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿ, ಮುಂಬೈ ಪೊಲೀಸರ ವಶಕ್ಕೆ ನೀಡಿದ್ದೇವೆ ಎಂದು ಹಾವೇರಿ ಪೊಲೀಸರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿ ಈ ಸುದ್ದಿಯನ್ನೂ ಓದಿ: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಪ್ರಕರಣ: ಹಾವೇರಿ ನಗರದಲ್ಲಿ ಆರೋಪಿ ಸೆರೆ