ರಾಮನಗರ : ಮೇಕೆದಾಟು ಯೋಜನೆ ಜಾರಿಗೆ ವಿಳಂಬ ವಿರೋಧಿಸಿ ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ನಗರದ ಐಜೂರು ವೃತ್ತದಲ್ಲಿ ಕನ್ನಡಪರ ಹೋರಾಟಗಾರರಾದ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾಣಿಸುತ್ತಿಲ್ಲ. ಹಾಗಾಗಿ ಮಧ್ಯಂತರ ಚುನಾವಣೆ ಬರುವ ಸುಳಿವಿದೆ. ಒಂದು ವೇಳೆ ಚುನಾವಣೆ ನಡೆದರೆ ನಾನು ಸ್ವಾಗತ ಮಾಡುತ್ತೇನೆ ಎಂದರು. ಮೇಕೆದಾಟು ವಿಚಾರದಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರ ಯಾವುದೇ ರೀತಿಯ ಆಸಕ್ತಿ ತೋರದೆ ಕಾಲಹರಣ ಮಾಡುತ್ತಿದೆ. ಅದಷ್ಟು ಬೇಗ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸಿಎಂ ಸೇರಿದಂತೆ ಎಲ್ಲ ಮಂತ್ರಿಗಳು ಬರಿ ನಾಟಕ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ರೈತರು ನೀರಿಗಾಗಿ ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಕುಮಾರಸ್ವಾಮಿ ಹೋರಾಟಗಾರರ ಸ್ಥಳಕ್ಕೆ ಬಾರದೆ ರೈತರನ್ನ ಮಾತನಾಡಿಸದೆ, ಕಾವೇರಿ ಪ್ರಾಧಿಕಾರದ ಮುಂದೆ ಪ್ರತಿಭಟನೆ ಮಾಡಿ ಅಂತಾ ಹೇಳುತ್ತಿದ್ದಾರೆ ಎಂದು ಕಿಡಿಕಾರಿದ್ರು.
ಜಿಂದಾಲ್ ವಿಚಾರವಾಗಿ ಮಾತನಾಡಿದ ವಾಟಾಳ್, ಜಿಂದಾಲ್ಗೆ ಭೂಮಿ ನೀಡಿರುವ ಸರ್ಕಾರದ ಕ್ರಮ ಖಂಡನೀಯ. ಕನ್ನಡ ಪರ ಸಂಘಟನೆಗಳು ಬಳ್ಳಾರಿಯಲ್ಲಿ ಹೋರಾಟ ಮಾಡದಂತೆ ಸರ್ಕಾರ ನೋಟಿಸ್ ಜಾರಿ ಮಾಡಿದೆ. ಇಂತಹ ನೋಟಿಸ್ಗಳಿಗೆ ನಾವು ಹೆದರುವುದಿಲ್ಲ. ಇದರ ವಿರುದ್ಧ ಮುಂದಿನ ತಿಂಗಳ 6ರಂದು ರಸ್ತೆ ಬಂದ್ ಮಾಡಲಾಗುವುದು ಎಂದು ಹೇಳಿದರು.
ರಾಜ್ಯ ಬಿಜೆಪಿಯ 25 ಸಂಸದರಿಗೆ ನರೇಂದ್ರ ಮೋದಿ ಒಬ್ಬರನ್ನ ಬಿಟ್ರೆ ಬೇರೆ ಏನೂ ಗೊತ್ತಿಲ್ಲ. ಈ ಕೂಡಲೇ ಕೇಂದ್ರಕ್ಕೆ ಒತ್ತಡ ತಂದು ಮಂಡ್ಯದ ನಾಲೆಗಳಿಗೆ ನೀರು ಬಿಡಿಸಬೇಕು. ಇಲ್ಲವಾದ್ರೆ ಮುಂದಿನ ದಿನಗಳಲ್ಲಿ ಸಂಸದರ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.