ರಾಮನಗರ : ರಾಜಕೀಯದಲ್ಲಿ ಸೇಫ್‌ಜೋನ್ ಇರುವುದಿಲ್ಲ. ಮಂತ್ರಿಗಿರಿ ಬದಲಾವಣೆ ಮಾಡುವುದು ಮುಖ್ಯಮಂತ್ರಿಯವರ ನಿರ್ಧಾರ. ಅವರು ಯಾವುದೇ ನಿರ್ಣಯ ತಗೆದುಕೊಂಡರೂ ನಾವು ಬದ್ಧರಾಗಿರುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್ ಹೇಳಿದರು.
ಜಿಲ್ಲೆಯ ಮಾಗಡಿ ಕೋಟೆ ಮೈದಾನದಲ್ಲಿ ಕೆಂಪೇಗೌಡ ಅಭಿವೃದ್ಧಿ ಸಮಿತಿ ವತಿಯಿಂದ ಆಯೋಜಿಸಿದ ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವುದಿಲ್ಲ. ರಾಮನಗರ ನನ್ನ ತವರು ಜಿಲ್ಲೆ. ಈ ಜಿಲ್ಲೆಯ ಮನೆಮಗನಾಗಿ ಸೇವೆ ಮಾಡಲು ಪ್ರಯತ್ನ ಮಾಡುತ್ತೇನೆ ಎಂದರು.
ನೂತನ ಶಾಸಕರಿಗೆ ಸಚಿವ ಸ್ಥಾನ ನೀಡಲು ಹಾಲಿ ಇರುವ ಸಚಿವರ ಸ್ಥಾನ ಬದಲಾಗುತ್ತದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜಕೀಯದಲ್ಲಿ ಸೇಫ್‌ಜೋನ್ ಇರೋದಿಲ್ಲ, ಮುಖ್ಯಮಂತ್ರಿ ಅವರ ನಿರ್ಧಾರವೇ ಅಂತಿಮ ಎಂದು ಹೇಳಿದ್ರು.
ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್. ವಿಶ್ವನಾಥ್ ಸೋಲಿಗೆ ಉಸ್ತುವಾರಿ ಹೊತ್ತಿದ್ದ ಸಿ. ಪಿ. ಯೋಗೇಶ್ವರ್ ಕಾರಣ ಎಂಬ ಜೆಡಿಎಸ್ ನಾಯಕ ಜಿ.ಟಿ.ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ಗೆಲುವಿಗೆ ಸಿ.ಪಿ. ಯೋಗೇಶ್ವರ್ ಸಾಕಷ್ಟು ಶ್ರಮಪಟ್ಟಿದ್ದಾರೆ. ಪ್ರಾಮಾಣಿಕವಾಗಿ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ. ಸಿ.ಪಿ ಯೋಗೇಶ್ವರ್ ಅವರು ನಮ್ಮ ನಾಯಕರು, ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನ ದೊರೆಯುತ್ತದೆ ಎಂದರು.