ರಾಮನಗರ: ಮಾಗಡಿ ತಾಲೂಕಿನ ಜೂನಿಯರ್ ಕಾಲೇಜ್ ಪರೀಕ್ಷಾ ಕೇಂದ್ರದ ಕೊಠಡಿಯಲ್ಲಿ ಪ್ರಾರ್ಥನೆ ಮಾಡಿದ ವಿದ್ಯಾರ್ಥಿಗಳು ಬಳಿಕ ಪರೀಕ್ಷೆ ಬರೆಯಲು ಪ್ರಾರಂಭಿಸಿದ್ದು ವಿಶೇಷವಾಗಿತ್ತು. ಕೋವಿಡ್ ಭೀತಿಯಲ್ಲಿಯೂ ಪರೀಕ್ಷೆ ಬರೆಯುತ್ತಿರುವ ಮಕ್ಕಳು ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಎಂದು ನಮಿಸಿದರು.
ಜಿಲ್ಲೆಯಲ್ಲಿ ಒಟ್ಟು 59 ಪರೀಕ್ಷಾ ಕೇಂದ್ರಗಳಿದ್ದು 13,307 ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪ್ರತಿ ಕೊಠಡಿಯಲ್ಲಿ 20 ಜನ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಸ್ಯಾನಿಟೈಸರ್, ಮಾಸ್ಕ್ ಬಳಕೆ ಕಡ್ಡಾಯವಾಗಿದೆ. ಥರ್ಮಲ್ ಸ್ಕ್ರೀನಿಂಗ್ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಕೊಠಡಿಗೆ ಪ್ರವೇಶ ನೀಡಲಾಗಿದೆ.
ಜಿಲ್ಲಾಧಿಕಾರಿಗಳು ಮತ್ತು ಡಿಡಿಪಿಐ ಸೇರಿದಂತೆ ಅಧಿಕಾರಿಗಳು ಕೂಡ ಗಸ್ತು ತಿರುಗುವ ಮೂಲಕ ಯಾವುದೇ ರೀತಿಯ ತೊಂದರೆಯಾಗದಂತೆ ಕಟ್ಟೆಚ್ಚರ ವಹಿಸಿದ್ದಾರೆ.