ರಾಮನಗರ : ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆ ಟ್ರಾನ್ಸ್ ಫಾರ್ಮರ್ ಶಾರ್ಟ್ ಆಗಿ ಹೊತ್ತಿ ಉರಿದು ವಿದ್ಯುತ್ ತಂತಿ ತುಂಡಾಗಿ ಕೆಳಗೆ ಬಿದ್ದಿರುವ ಘಟನೆ ನಡೆದಿದೆ.
ನಗರದ ಹೆದ್ದಾರಿಯಲ್ಲಿರುವ ಕೆಂಗಲ್ ಹನುಮಂತಯ್ಯ ಭವನದ ಬಳಿ ದಿಢೀರ್ ವಿದ್ಯುತ್ ಕಂಬದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನೋಡ ನೋಡುತ್ತಿದ್ದಂತೆಯೇ ಸಿಡಿಯಲಾರಂಭಿಸಿದ ಶಬ್ದ ಅಕ್ಕಪಕ್ಕದ ಹಾಗೂ ದಾರಿಹೋಕರಲ್ಲಿ ಆತಂಕ ಸೃಷ್ಟಿಸಿತ್ತು.
ನಂತರ ವಿದ್ಯತ್ ಲೈನ್ ತುಂಡಾಗಿ ಹೆದ್ದಾರಿಯಲ್ಲೇ ನೆಲಕ್ಕುರುಳಿ ಬಿದ್ದಿತ್ತು. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯವಾಗಿಲ್ಲ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿಯೇ ಘಟನೆ ಸಂಭವಿಸಿದ್ದ ಈ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ ಸದಾ ಜನ ಸಂಚರಿಸುತ್ತಿರುತ್ತಾರೆ. ಅಲ್ಲದೆ ವಾಹನಗಳ ಸಂಚಾರ ಕೂಡಾ ಹೆಚ್ಚಾಗಿರುತ್ತದೆ. ಆದ್ರೆ ಈ ಅವಘಡ ನಡೆದ ಸಂದರ್ಭದಲ್ಲಿ ಯಾರಿಗೂ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದುಬಂದಿದೆ.
ಗ್ರೌಂಡ್ ಕೇಬಲಿಂಗ್ ಮಾಡಿಲ್ಲ, ವಿದ್ಯುತ್ ಪ್ರವಾಹಕಗಳ ಜೊತೆಗೆ ನಗರದ ಯಾವುದೇ ಭಾಗಕ್ಕೆ ಭೂಮಿ ಮೇಲೆ ವಿದ್ಯುತ್ ವಯರ್ ಕೊಂಡೊಯ್ಯದೆ ನೆಲದ ಮೂಲಕ ಕೊಂಡೊಯ್ಯುವ ನಿಯಮ ಬೆಸ್ಕಾಂನಲ್ಲಿದೆ. ಆದರೆ ಹೆದ್ದಾರಿಯಲ್ಲಿಯೇ ನಿಯಮಪಾಲಿಸದ ಬೆಸ್ಕಾಂ ನಿರ್ಲಕ್ಷ್ಯ ಈ ಅವಘಡಕ್ಕೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಅವಘಡದಿಂದಲಾದರೂ ಬೆಸ್ಕಾಂ ಬುದ್ಧಿ ಕಲಿತು ಮುಂದೆ ಅಪಾಯವಾಗದಂತೆ ಕ್ರಮ ವಹಿಸಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.