ರಾಮನಗರ: ಅಕ್ರಮವಾಗಿ ಗೃಹ ಬಂಧನದಲ್ಲಿಟ್ಟು ಅತ್ಯಾಚಾರ, ಬಲವಂತದ ಗರ್ಭಪಾತ ಹಾಗೂ ದೈಹಿಕ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ 19 ವರ್ಷದ ಯುವತಿ ರಾಮನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರಾಮನಗರ ತಾಲೂಕಿನ ಗ್ರಾಮವೊಂದರ ಸಂತ್ರಸ್ತ ಯುವತಿ ಶನಿವಾರ ದೂರು ದಾಖಲಿಸಿ, ಕ್ರಮ ಕೈಗೊಳ್ಳುವಂತೆ ಎಸ್ಪಿಗೆ ಮನವಿ ಮಾಡಿದ್ದಾರೆ.
'ನಾಲ್ಕು ತಿಂಗಳ ಹಿಂದೆ ಮನೆಯವರ ಜೊತೆ ಮನಸ್ತಾಪ ಮಾಡಿಕೊಂಡು ರಾಮನಗರ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ವೇಳೆ ಅಲ್ಲಿಗೆ ಪ್ರೀತಿ, ಸೌಮ್ಯಾ, ಯೋಗೇಶ್ ಎಂಬ ಮೂವರು ಆಗಮಿಸಿ ಅನಾಥಾಶ್ರಮದಲ್ಲಿ ಆಶ್ರಯ ನೀಡುವುದಾಗಿ ಕರೆದೊಯ್ದಿದ್ದರು. ಬಳಿಕ ಕೆಲವು ವಾರ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದರು. ನಂತರ ಪ್ರೀತಿ ಎಂಬುವರ ಸಹೋದರ ಯೋಗೇಶ್ ಎಂಬಾತ ನನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದ. ಇದರಿಂದ ನಾನು ಗರ್ಭವತಿ ಆಗಿದ್ದೆ. ನನ್ನ ಅಣ್ಣನನ್ನು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿ ಗರ್ಭಪಾತ ಮಾಡಿಸಿದ್ದರು. ಬಳಿಕ ಮತ್ತೊಬ್ಬ ಯುವಕನ ಜೊತೆ ಬಲವಂತವಾಗಿ ಮದುವೆ ಮಾಡಿಸಿದ್ದರು' ಎಂದು ಸಂತ್ರಸ್ತೆ ದೂರಿದ್ದಾರೆ.
ನಂತರ ಅಲ್ಲಿಂದ ತಪ್ಪಿಸಿಕೊಂಡು ಸಾಂತ್ವನ ಕೇಂದ್ರವೊಂದರಲ್ಲಿ ತಿಂಗಳುಗಳ ಕಾಲ ಆಶ್ರಯ ಸಂತ್ರಸ್ತೆ ಪಡೆದಿದ್ದರಂತೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂತ್ರಸ್ತ ಯುವತಿ ದೂರಿನಲ್ಲಿ ಒತ್ತಾಯಿಸಿದ್ದಾರೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಮತ್ತೊಂದೆಡೆ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
(ಓದಿ: ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಕಪಾಳಮೋಕ್ಷ ಮಾಡಿದ ಸಚಿವ ವಿ. ಸೋಮಣ್ಣ)