ರಾಮನಗರ: ರಾಜ್ಯ ಸರ್ಕಾರಕ್ಕೆ ಜನರ ಆರೋಗ್ಯ ಮುಖ್ಯವಲ್ಲ, ಅಧಿಕಾರ ಮಾತ್ರವೇ ಮುಖ್ಯವಾಗಿದೆ ಎಂದು ಸಂಸದ ಡಿಕೆ ಸುರೇಶ್ ಟೀಕಿಸಿದರು.
ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಮಾತನಾಡಿದ ಅವರು, ಯಾರನ್ನು ಎಂಎಲ್ಸಿ, ಮುಖ್ಯಸ್ಥರನ್ನಾಗಿ ಮಾಡಬೇಕು. ಮಂತ್ರಿ ಮಂಡಲ ಹೇಗೆ ರಚಿಸಬೇಕು. ಕೊರೊನಾ ಹೆಸರಿನಲ್ಲಿ ಎಷ್ಟು ಹಣ ಮಾಡಬೇಕು ಎಂಬುದಷ್ಟೇ ಸರ್ಕಾರದ ಉದ್ದೇಶವಾಗಿದೆ. ಅವರಿಗೆ ಜನರ ಆರೋಗ್ಯ ಮುಖ್ಯವಾಗಿಲ್ಲ, ಬದಲಿಗೆ ಅಧಿಕಾರವೇ ಮುಖ್ಯವಾಗಿದೆ ಎಂದು ಆರೋಪಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿಪಿ ಯೋಗೇಶ್ವರ್ ನಡುವಿನ ವಾಕ್ಸಮರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆ ವಿಚಾರದ ಬಗ್ಗೆ ಇನ್ನೊಮ್ಮೆ ಮಾತನಾಡೋಣ. ಅದರ ಬಗ್ಗೆ ಈಗ ಚರ್ಚೆ ಬೇಡ. ಸಿಪಿವೈಗೆ ಎಂಎಲ್ಸಿ ಆಗಲು ಅವಕಾಶ ಕೊಟ್ಟವರಿಗೆ ನಂಬಿಕೆಯಿಂದ ಇದ್ದರೆ ಸಾಕು. ನಮಗೇನು ಆಗಬೇಕಿಲ್ಲಾ ಎಂದರು.
ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಲು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ. ಕೋವಿಡ್ ಸ್ಥಿತಿಯಲ್ಲಿ ಜನರು ಒಟ್ಟಿಗೆ ಸೇರಲು ಸಾಧ್ಯವಿಲ್ಲ. ಹೀಗಾಗಿ ಮಾಧ್ಯಮಗಳ ಮೂಲಕ ಹೋರಾಟ ಮಾಡುತ್ತಿದ್ದೇವೆ. ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಸರ್ಕಾರ ಹಾಗೂ ಆಡಳಿತ ವ್ಯವಸ್ಥೆ ನಡುವೆ ಹೊಂದಾಣಿಕೆ ಇಲ್ಲದಂತಾಗಿದೆ. ವರ್ಗಾವಣೆ ದಂಧೆ ನಡೆಯುತ್ತಿದೆ. ಅಧಿಕಾರಿಗಳ ವರ್ಗಾವಣೆ ಬಿಟ್ಟು ಜನರ ಆರೋಗ್ಯದತ್ತ ಗಮನ ಹರಿಸಬೇಕಾಗಿದೆ. ಸರ್ಕಾರದ ವೈಫಲ್ಯ ವಿರೋಧಿಸಿ ಕಾಂಗ್ರೆಸ್ ಮನೆ-ಮನೆಗೆ ವೈದ್ಯಕೀಯ ವ್ಯವಸ್ಥೆ ನೀಡಲು ಚಿಂತನೆ ನಡೆಸುತ್ತಿದೆ ಎಂದರು.