ರಾಮನಗರ: ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ನಡೆದಿದ್ದ ನಟರಿಬ್ಬರ ಸಾವಿನ ಪ್ರಕರಣದಿಂದ ಕೈಬಿಡುವಂತೆ ಕೋರಿ ಸಲ್ಲಿಸಲಾಗಿದ್ದ 6 ಅರ್ಜಿಗಳಲ್ಲಿ 5 ಆರೋಪಿಗಳ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿ ಆದೇಶ ಹೊರಡಿಸಿದೆ.
ರಾಮನಗರದ 3ನೇ ಜಿಲ್ಲಾ ಸತ್ರ ನ್ಯಾಯಾಲಯ ಐವರು ಆರೋಪಿಗಳ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದ್ದು, ಅರ್ಜಿ ವಜಾ ಮಾಡಲಾಗಿದೆ ಎಂದು ನ್ಯಾಯಾಧೀಶರಾದ ಸಿದ್ಧಲಿಂಗಪ್ರಭು ಆದೇಶಿಸಿದ್ದಾರೆ.
ಆರೋಪಿ ಪ್ರಕಾಶ್ ಬಿರಾದರ್ ವಿರುದ್ಧ ಸ್ಯಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಅವರನ್ನು ಪ್ರಕರಣದಿಂದ ಕೈಬಿಡಲಾಗಿದೆ. ಶೂಟಿಂಗ್ ವೇಳೆ ಪ್ರಕಾಶ್ ಬಿರಾದರ್ ಹೆಲಿಕಾಪ್ಟರ್ ಚಾಲನೆ ಮಾಡಿದ್ದರು. ಬಿರಾದರ್ ಪರ ಹಿರಿಯ ವಕೀಲ ಐ.ಎಸ್.ದಿಲೀಪ್‌ಕುಮಾರ್ ವಾದ ಮಂಡಿಸಿದರು.
ಪ್ರಕರಣದ ಪ್ರಮುಖ ಆರೋಪಿಗಳಾಗಿರುವ ನಿರ್ಮಾಪಕ ಸುಂದರ್ ಪಿ. ಗೌಡ(ಎ1), ನಿರ್ದೇಶಕ ರಾಜಶೇಖರ್(ಎ2), ಸಿದ್ದಾರ್ಥ್ ಅಲಿಯಾಸ್ ಸಿದ್ದು(ಎ3), ಸಾಹಸ ನಿರ್ದೇಶಕ ರವಿವರ್ಮಾ(ಎ4) ಮತ್ತು ಎ.ಪಿ.ಭರತ್ ರಾವ್(ಎ5) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದ್ದು, ಐವರು ಆರೋಪಿಗಳಿಗೆ ಕೋರ್ಟ್ನಲ್ಲಿ ಹಿನ್ನಡೆಯಾಗಿದೆ.
ನಡೆದಿದ್ದೇನು: ರಾಮನಗರ ಜಿಲ್ಲೆಯ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ನವೆಂಬರ್ 7, 2016ರಂದು ನಡೆದ ನಟ ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ದುರಂತ ನಡೆದಿತ್ತು.
ಕ್ಲೈಮ್ಯಾಕ್ಸ್ ಶೂಟಿಂಗ್ಗಾಗಿ ಹೆಲಿಕಾಪ್ಟರ್ನಿಂದ 100 ಅಡಿ ಎತ್ತರದಿಂದ ಖಳನಟ ಅನಿಲ್, ಉದಯ್ ಹಾಗೂ ನಾಯಕ ನಟ ದುನಿಯಾ ವಿಜಯ್ ಜಲಾಶಯಕ್ಕೆ ಜಿಗಿದಿದ್ದರು.
ಈ ವೇಳೆ ದುನಿಯಾ ವಿಜಯ್ ಅವರನ್ನು ತೆಪ್ಪದ ಮೂಲಕ ರಕ್ಷಣೆ ಮಾಡಿದ್ದರೆ, ಅನಿಲ್ ಮತ್ತು ಉದಯ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಜಲಸಮಾಧಿಯಾಗಿದ್ದ ಇಬ್ಬರ ಮೃತದೇಹ 48 ಗಂಟೆಯ ಬಳಿಕ ಪತ್ತೆಯಾಗಿತ್ತು.