ಬೆಳಗಾವಿ: ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿ ವಿರೋಧಿಸಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು. ಶಾಸಕ ಮಹಾಂತೇಶ ಕೌಜಲಗಿ ನೇತೃತ್ವದಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ಬೈಲಹೊಂಗಲ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.
ಪ್ರತಿಭಟನೆ ವೇಳೆ ರಾಷ್ಟ್ರಗೀತೆಗೆ ಗೌರವ ಸಲ್ಲಿಸಲಾಯಿತು. ಪ್ರತಿಭಟನಾಕಾರರು ಭಾರತ ಮಾತಾಕೀ ಜೈ, ವಂದೇ ಮಾತರಂ ಘೋಷಣೆ ಕೂಗಿದರು. ಬಳಿಕ ಕ್ಯಾಬ್ ಜಾರಿ ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು.
ರಾಮನಗರ: ಪೌರತ್ವ ಕಾಯ್ದೆ ವಿರೋಧಿಸಿ ರಾಮನಗರದಲ್ಲಿ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿದರು. ನಗರದ ರೈಲು ನಿಲ್ದಾಣದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಮೆರವಣಿಗೆ ನಡೆಸಿದರು. ಪ್ರತಿಭಟನೆಯಲ್ಲಿ 10 ಸಾವಿರಾಕ್ಕೂ ಹೆಚ್ಚು ಮುಸ್ಲಿಮರು ಭಾಗವಹಿಸಿದ್ದರು. ಪ್ರತಿಭಟನಾಕಾರರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ನಡೆಸಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಬಹಿರಂಗ ಸಭೆ ನಡೆಸಲಾಯಿತು. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಭೆ ಉದ್ದೇಶಿಸಿ ಮಾತನಾಡಿದರು.
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಂಸದ ಡಿ.ಕೆ.ಸುರೇಶ್, ಶಾಸಕಿ ಅನಿತಾ ಕುಮಾರಸ್ವಾಮಿ, ಎಂಎಲ್ಸಿಗಳಾದ ಸಿ.ಎಂ.ಲಿಂಗಪ್ಪ, ಎಸ್.ರವಿ ಸೇರಿ ಹಲವು ನಾಯಕರು ಭಾಗವಹಿಸಿದ್ದರು.
ದೊಡ್ಡಬಳ್ಳಾಪುರ : ಪೌರತ್ವ ತಿದ್ದುಪಡೆ ಕಾಯ್ದೆ ವಿರೋಧಿಸಿ ದೊಡ್ಡಬಳ್ಳಾಪುರ ಮುಸ್ಲಿಂ ಬಾಂಧವರು ಶಾಂತಿಯುತ ಮೆರವಣಿಗೆ ನಡೆಸಿದರು. ನಗರದ ಇಸ್ಲಾಂಪುರದಿಂದ ತಾಲೂಕು ಕಚೇರಿವರೆಗೂ ಮೆರವಣಿಗೆಯಲ್ಲಿ ಸಾಗಿದ ಮುಸ್ಲಿಂ ಬಾಂಧವರು ಪೊಲೀಸರಿಗೆ ಹೂ ನೀಡುವ ಮೂಲಕ ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ಹೆಜ್ಜೆ ಹಾಕಿದರು.
ಪ್ರತಿಭಟನೆ ಮೆರವಣಿಗೆಯಲ್ಲಿ ಶಾಸಕ ಟಿ.ವೆಂಕಟರಮಣ್ಯ ಸೇರಿದಂತೆ ಹಲವು ಮುಸ್ಲಿಂ ಮುಖಂಡರು ಭಾಗಿಯಾಗಿದ್ದರು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರ ಬಂದೋಬಸ್ತ್ ಮಾಡಿದ್ದರು.
ತುಮಕೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ತುಮಕೂರಿನಲ್ಲಿ ಪ್ರಗತಿಪರ ನಾಗರಿಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ಧರಣಿ ನಡೆಸಲಾಯಿತು.
ಸುಮಾರು 10,000 ಮಂದಿ ಪ್ರತಿಭಟನಕಾರರು ಧರಣಿಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಶಫಿ ಅಹಮದ್, ಶಾಸಕ ಗೌರಿಶಂಕರ್ ಸೇರಿದಂತೆ ವಿವಿಧ ಸಂಘಟನೆ ಮುಖಂಡರು ಭಾಗವಹಿಸಿದ್ದರು. ಪ್ರತಿಭಟನಾ ಸಭೆ ಆರಂಭಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಪ್ರತಿಭಟನಾಕಾರರು ಹಾಡಿದ್ದು ಗಮನಾರ್ಹವಾಗಿತ್ತು. ಮುಂಜಾಗೃತ ಕ್ರಮವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. sಕೊನೆಯಲ್ಲಿ ಪ್ರತಿಭಟನೆ ಶಾಂತಿಯುತವಾಗಿ ನಡೆಯಲು ಸಹಕರಿಸಿದ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಪ್ರತಿಭಟನಾಕಾರರು ಜೈಕಾರ ಕೂಗಿ ಧನ್ಯವಾದಗಳನ್ನು ಅರ್ಪಿಸಿದರು.