ರಾಮನಗರ: ಜಿಲ್ಲೆಯ ಚನ್ನಪಟ್ಟಣದ ಕೋಟೆ ಬೀದಿಯಲ್ಲಿರುವ ಕಾಶಿ ವಿಶ್ವನಾಥ ದೇವಾಲಯ ತನ್ನದೇ ಆದ ಪ್ರಖ್ಯಾತಿಯನ್ನು ಹೊಂದಿದೆ. ಜನರ ಸಮಸ್ಯೆಗಳನ್ನು ಪರಿಹರಿಸುವ ಪುಣ್ಯ ಕ್ಷೇತ್ರವೆಂದು ಖ್ಯಾತಿ ಪಡೆದಿದ್ದು, ವಿಶೇಷವಾಗಿ ಶಿವರಾತ್ರಿ ವೇಳೆ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಈ ಸಂಬಂಧ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಕಾಶಿ ವಿಶ್ವನಾಥ ದೇವಾಲಯ ಸುಮಾರು 350 ರಿಂದ 400 ವರ್ಷಗಳ ಇತಿಹಾಸವನ್ನು ಹೊಂದಿದ್ದು, ಇಲ್ಲಿರುವ ವಿಶ್ವನಾಥ ದೇವರ ವಿಗ್ರಹವನ್ನು ಮೈಸೂರಿನ ಜಗದೇವರಾಜ ಅರಸು ಹಾಗೂ ತಿಮ್ಮಪ್ಪರಾಜ ಅರಸುರವರು ಕಾಶಿಯಿಂದ ತಂದು ಬ್ರಹ್ಮಣೀ ತೀರ್ಥ ಆರಾಧ್ಯರಿಂದ ಪ್ರತಿಷ್ಠಾಪನೆ ಮಾಡಿದ್ದಾರೆ ಎಂಬ ಐತಿಹ್ಯವಿದೆ. ಉತ್ತರ ಭಾರತದ ಕಾಶಿಯಿಂದ ತಂದು ದೇವರನ್ನು ಪ್ರತಿಷ್ಠಾಪನೆ ಮಾಡಿದ ಹಿನ್ನೆಲೆಯಲ್ಲಿ ಮೊದಲು ಈ ದೇಗುಲವನ್ನು ಕಾಶಿ ಪತಿ ದೇವಸ್ಥಾನವೆಂದು ಕರೆಯಲಾಗುತ್ತಿತ್ತು. ಬಳಿಕ ಕಾಶಿ ವಿಶ್ವನಾಥ ದೇವರೆಂದು ಕರೆಯಲಾಯಿತು.

ಶಿವರಾತ್ರಿಗೆ ಹರಿದು ಬರುತ್ತೆ ಭಕ್ತ ಸಾಗರ :
ಶಿವರಾತ್ರಿ ಹಬ್ಬದ ದಿನ ಕಾಶಿ ವಿಶ್ವನಾಥ ದೇವರ ದರ್ಶನ ಪಡೆದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಉತ್ತರ ಭಾರತದಲ್ಲಿರುವ ಕಾಶಿಗೆ ಹೋಗಲು ಸಾಧ್ಯವಾಗದ ಅದೆಷ್ಟೋ ಭಕ್ತರು ಈ ಕಾಶಿ ವಿಶ್ವನಾಥನ ದರ್ಶನ ಪಡೆಯುತ್ತಾರೆ. ಇಲ್ಲಿಗೆ ತಮಿಳುನಾಡು, ಆಂಧ್ರ, ಕೇರಳ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತ ಸಾಗರವೇ ಹರಿದು ಬರುತ್ತದೆಯಂತೆ. ಆ ದಿನ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ-ಹವನಗಳನ್ನು ಮಾಡುತ್ತಾರೆ. ಇದಕ್ಕಾಗಿ ಈಗಿನಿಂದಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಎಲ್ಲಾ ಸಮಸ್ಯೆ ಪರಿಹರಿಸುತ್ತಾನಂತೆ ವಿಶ್ವನಾಥ:
ವ್ಯಾಪಾರ, ವ್ಯವಹಾರ, ಮಕ್ಕಳ ಸಮಸ್ಯೆ, ರೋಗ ರುಜಿಣಗಳು ಹೀಗೆ ವಿವಿಧ ಸಮಸ್ಯೆಗಳ ನಿವಾರಣೆಗಾಗಿ ಜನರು ಹರಕೆಗಳನ್ನು ಕಟ್ಟಿಕೊಳ್ಳುತ್ತಾರೆ. ಬಳಿಕ ಕಾಶಿ ವಿಶ್ವನಾಥನ ದೇಗುಲಕ್ಕೆ ಬಂದು ತೀರಿಸುತ್ತಾರೆ. ಇದರಿಂದ ತಮ್ಮ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಪುರಾತನ ಕಾಲದಿಂದ ನಡೆದುಕೊಂಡು ಬಂದಿದೆ. ಅಷ್ಟೇ ಅಲ್ಲದೆ ದೇವರಿಗೆ ಮಾಡಿದ ಅಭಿಷೇಕದ ನೀರನ್ನು ಮೈಮೇಲೆ ಹಾಕಿದರೆ ಎಲ್ಲಾ ಕಾಯಿಲೆಗಳು ನಿವಾರಣೆ ಆಗುತ್ತವೆ ಎಂಬ ನಂಬಿಕೆಯೂ ಇದೆ.