ರಾಮನಗರ: ಚಾಮುಂಡೇಶ್ವರಿ ಕರಗ ಮಹೋತ್ಸವ ಅಂಗವಾಗಿ ಇಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಕಳೆದ 15 ವರ್ಷಗಳಿಂದಲೂ ಕುಮಾರಸ್ವಾಮಿಯವರು ಗೈರಾಗಿರಲಿಲ್ಲ. ಆದರೆ ಈ ಭಾರಿ ವಿಶ್ವಾಸಮತ ಕಳೆದುಕೊಂಡ ಬೇಸರದಲ್ಲಿ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಎನ್ನಲಾಗುತ್ತಿದೆ.
ದೇವರು ಮತ್ತು ಜ್ಯೋತಿಷ್ಯ ವಿಚಾರಗಳಲ್ಲಿ ದೇವೇಗೌಡರ ಕುಟುಂಬಕ್ಕೆ ಅಪಾರ ನಂಬಿಕೆ. ಅದರ ಜೊತೆಗೆ ಹೆಚ್ಡಿಕೆ ಕುಮಾರಸ್ವಾಮಿ ಕೂಡ ದೇವರ ಬಗ್ಗೆ ಅತಿಯಾದ ನಂಬಿಕೆ ಉಳ್ಳವರು. ಅವರು 1996 ರಲ್ಲಿ ರಾಜಕೀಯಕ್ಕೆ ರಾಮನಗರ ಕ್ಷೇತ್ರದಿಂದ ಎಂಟ್ರಿ ಕೊಟ್ಟಿದ್ದು, ಅಂದಿನಿಂದ ಇಂದಿನವರೆಗೂ ನಗರದ ಶಕ್ತಿದೇವತೆ ಚಾಮುಂಡೇಶ್ವರಿ ದೇವಾಲಯಕ್ಕೆ ಪರಮ ಭಕ್ತನಾಗಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದರು.
ಈ ಭಾರಿ ಚಾಮುಂಡಿ ಹಬ್ಬದ ಪ್ರಯುಕ್ತ ಇಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜೆಡಿಎಸ್ವತಿಯಿಂದ ಚಾಮುಂಡೇಶ್ವರಿ ಕರಗದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಸಾರಥ್ಯದಲ್ಲಿ ಅಶ್ವಿನ್ ಸುಷ್ಮಾ, ಆಧ್ಯ, ಶಾಶ್ವತಿ, ನಿಖಿಲ್ ಪಾರ್ಥಸಾರಥಿ, ಅನುರಾಧ ಭಟ್, ಇಂಪನ ಗಾನಸುಧೆ ಹರಿಸಿ ವಿವಿಧ ಚಲನಚಿತ್ರ ಹಾಡುಗಳಿಗೆ ನೃತ್ಯ ಮಾಡಿದರು. ಆದರೆ ಇದೆಲ್ಲದರ ನೇತಾರ ಹೆಚ್.ಡಿ.ಕುಮಾರಸ್ವಾಮಿ ಮಾತ್ರ ಕಾರ್ಯಕ್ರಮಕ್ಕೆ ಇದೇ ಮೊದಲ ಬಾರಿಗೆ ಎಚ್‌ಡಿಕೆ ಗೈರಾಗಿದ್ದರು.
ಜಿಲ್ಲೆಯಲ್ಲೇ ರಾಜಕೀಯ ಭವಿಷ್ಯ ಆರಂಭ:
ರಾಮನಗರದಲ್ಲಿ ತಮ್ಮ ರಾಜಕೀಯ ಭವಿಷ್ಯ ಕಂಡುಕೊಂಡು ನಗರದ ಚಾಮುಂಡೇಶ್ವರಿ ದೇವಿಯ ಭಕ್ತರಾಗಿದ್ದ ಅವರು ಪ್ರತಿ ವರ್ಷ ತಮ್ಮ ಹುಟ್ಟುಹಬ್ಬಕ್ಕೆ ಈ ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಅಲ್ಲದೇ ಚಾಮುಂಡೇಶ್ವರಿ ಕರಗ ಮಹೋತ್ಸವದ ಅಂಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಳೆದ 15 ವರ್ಷಗಳಿಂದಲೂ ಗೈರಾಗಿರಲಿಲ್ಲ. ಆದರೆ ಚಾಮುಂಡಿ ಹಬ್ಬದ ದಿನದಂದೇ ಎಚ್.ಡಿ. ಕುಮಾರಸ್ವಾಮಿ ಅವರು ವಿಶ್ವಾಸ ಮತ ಗಳಿಸದೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು.
ಪ್ರತಿ ವರ್ಷ ಕುಮಾರಸ್ವಾಮಿರವರು ಪತ್ನಿ ಅನಿತಾ,ಪುತ್ರ ನಿಖಿಲ್ ಅವರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಆದರೆ ಕುಮಾರಸ್ವಾಮಿ ಮತ್ತು ಅನಿತಾರವರು ವಿಶ್ವಾಸಮತ ಯಾಚನೆಯಲ್ಲಿ ಪಾಲ್ಗೊಂಡಿದ್ದರಿಂದ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ತಮ್ಮ ಧಾರ್ಮಿಕ ಸಂಪ್ರದಾಯ ಪಾಲನೆ ತಪ್ಪಿದೆ. ತಾವು ನಂಬಿದ್ದ ದೇವಿಯ ಹಬ್ಬದಂದೆ ಅಧಿಕಾರ ಕಳೆದುಕೊಂಡಿದ್ದರಿಂದ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಗೈರಾಗಿದ್ದರು ಎನ್ನಲಾಗುತ್ತಿದೆ.