ರಾಮನಗರ : ಟೈರ್ ಸಂಗ್ರಹ ಮಾಡಿದ್ದ ಗೋಡೌನ್ನಲ್ಲಿ ಅಗ್ನಿ ಅವಘಡ ಸಂಭವಿಸಿ ಗೋಡೌನ್ ಸುಟ್ಟು ಕರಕಲಾದ ಘಟನೆ ನಡೆದಿದೆ.
ರಾಮನಗರದ ಹುಣಸನಹಳ್ಳಿ ರಸ್ತೆಯಲ್ಲಿರುವ ಯಾರಬ್ ನಗರದ ಗೋಡೌನ್ನಲ್ಲಿ ಬೆಳಗ್ಗೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಗೋಡೌನ್ ಹೊತ್ತಿ ಉರಿಯತೊಡಗಿದೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಐದು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯಿತು. ಸತತ 30 ನಿಮಿಷಗಳ ಕಾರ್ಯಾಚರಣೆ ಬಳಿಕ ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿದೆ.
ನಗರ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಗೋಡೌನ್ನಲ್ಲಿ ಅಕ್ರಮವಾಗಿ ಟೈರ್ ಫ್ಯಾಕ್ಟರಿ ನಡೆಸಲಾಗುತ್ತಿತ್ತು ಎನ್ನುವ ಆರೋಪ ಕೇಳಿ ಬರುತ್ತಿದೆ. ಅಕ್ರಂ ಷರೀಫ್ ಎಂಬುವವರಿಗೆ ಸೇರಿರುವ ಹಳೆ ಟೈರ್ ಸಂಗ್ರಹದ ಗೋಡೌನ್ನ ಅಕ್ಕ -ಪಕ್ಕದಲ್ಲಿ ಮನೆಗಳಿಲ್ಲದಿರುವುದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ನೂರಾರು ಟೈರ್ಗಳು ಏಕಕಾಲದಲ್ಲಿ ಹೊತ್ತಿ ಉರಿದ ಹಿನ್ನೆಲೆಯಲ್ಲಿ ಬೆಂಕಿ ಕೆನ್ನಾಲಿಗೆ ತಹಬದಿಗೆ ತರಲು ಅಗ್ನಿಶಾಮಕದಳದ ಸಿಬ್ಬಂದಿ ಹರಸಾಹಸಪಡಬೇಕಾಯಿತು.
ಅಗ್ನಿ ಅವಘಡಕ್ಕೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿರಬಹುದೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ರಾಮನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.