ರಾಮನಗರ: ಸಂಭವನೀಯ ಕೋವಿಡ್- 3 ನೇ ಅಲೆಯ ಸಂದರ್ಭದಲ್ಲಿ ಯಾವುದೇ ಮಕ್ಕಳಿಗೆ ತೊಂದರೆಯಾಗದಂತೆ ಹಾಗೂ ತುರ್ತುಚಿಕಿತ್ಸೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಕ್ಕಳ ತಜ್ಞರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂಬ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು, ದಯಾನಂದ ಸಾಗರ ಮೆಡಿಕಲ್ ಕಾಲೇಜು, ಜಿಲ್ಲೆಯ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞರ ಸಭೆ ಕರೆಯಲಾಗಿದೆ. ಮುಂದಿನ ದಿನಗಳಲ್ಲಿ ನಿರಂತರ ಸಭೆ ಹಾಗೂ ಸಿದ್ಧತಾ ಕೆಲಸಗಳು ನಡೆಯಲಿದ್ದು ಎಲ್ಲರೂ ಸಹಕರಿಸಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು ಎಂದರು.
ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳಿಗೆ 50 ಐಸಿಯುಗಳ ವ್ಯವಸ್ಥೆ ಮಾಡಲಾಗುತ್ತಿದೆ. ಅವುಗಳ ಕಾರ್ಯನಿರ್ವಹಣೆ ಸೇರಿದಂತೆ ಬೇಕಿರುವ ಇನ್ನಿತರ ವೈದ್ಯಕೀಯ ಪರಿಕರಗಳ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದರು. ತಾಲೂಕುವಾರು ಮಕ್ಕಳ ಕೋವಿಡ್ ಕೇರ್ ಸೆಂಟರ್ ಗಳು ತೆರೆಯಲು ವ್ಯವಸ್ಥೆಯಾಗಬೇಕು. ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಮಕ್ಕಳ ಜೊತೆ ತಾಯಿ ಕೂಡ ಇರಬೇಕಾಗುತ್ತದೆ. ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದರ ಕುರಿತಾಗಿ ರೂಪುರೇಷೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.
ಇದನ್ನೂ ಓದಿ: Online ಕ್ಲಾಸ್ಗಾಗಿ ಬೆಟ್ಟ ಏರಿದ ವಿದ್ಯಾರ್ಥಿಗಳು: ನೆಟ್ವರ್ಕ್ ಭಾಗ್ಯ ಕಲ್ಪಿಸುವಂತೆ ಮನವಿ
ಕೋವಿಡ್ ಲಸಿಕೆಯನ್ನು ಮೊದಲು ತಾಯಂದಿರನ್ನು ಗುರುತಿಸಿ ನೀಡಬೇಕಿದೆ. ಇದರಿಂದ ಕೋವಿಡ್‌ನಿಂದ ಮಕ್ಕಳನ್ನು ಆದಷ್ಟು ಮಟ್ಟಿಗೆ ರಕ್ಷಿಸಬಹುದು. ಮಕ್ಕಳ ಪೋಷಕರಿಗೆ ಮಕ್ಕಳಿಗೆ ಪೌಷ್ಠಿಕ ಆಹಾರ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ನೀಡುವಂತೆ ಜಾಗೃತಿ ಮೂಡಿಸಬೇಕು ಎಂದರು.